ಬಳ್ಳಾರಿ: ಸ್ವಾತಂತ್ರೃ ನಂತರ ನಮ್ಮ ದೇಶದ ನಿರ್ಮಾಣದಲ್ಲಿ ಸಂವಿಧಾನವು ಭದ್ರ ಬುನಾದಿಯಾಗಿ ನಿಂತಿದೆ. ಭಾರತ ಸಂವಿಧಾನಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನವು 1947 ಕ್ಕಿಂತ 100 ವರ್ಷಗಳ ಮೊದಲು ವಿದೇಶಿ ಆಡಳಿತದ ವಿರುದ್ಧ ವಿವಿಧ ರೂಪಗಳಲ್ಲಿ ಲಕ್ಷಾಂತರ ಜನರು ಮಾಡಿದ ತ್ಯಾಗದ ಪ್ರತಿಫಲವಾಗಿದೆ. ಅನೇಕ ದೇಶಗಳ ಸಂವಿಧಾನ ಅಭ್ಯಸಿಸಿ, ನಮ್ಮ ದೇಶದ ಸಂವಿಧಾನ ರಚನೆ ಮಾಡಲಾಯಿತು. ಸಂವಿಧಾನವನ್ನು ರಚಿಸುವ ಕಾರ್ಯವು 1946 ರಿಂದ 1949 ರವರೆಗೆ ನಡೆಯಿತು. ಈ ಕಾರ್ಯವು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನುತಗೆದುಕೊಂಡಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಯಕತ್ವದ ಕರಡು ರಚನಾ ಸಮಿತಿಗೆ ಹೆಚ್ಚಿನ ಶ್ರೇಯ ಸಿಗುತ್ತದೆ ಎಂದು ಮನನ ಮಾಡಿದರು.
ಸಂವಿಧಾನವು ಸಮಾನತೆ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೆ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ. ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾನ್ಯನೂ ಈ ದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಅವಕಾಶ ಕಲ್ಪಿಸಿರುವುದು ಸಂವಿಧಾನವಾಗಿದೆ. ಇಂದಿನ ಯುವ ಪೀಳಿಗೆಯು ಸಮರ್ಥರಾಗಿ ವಿದ್ಯಾಭ್ಯಾಸ ನಡೆಸಬೇಕು. ನವ ರಾಷ್ಟ್ರ ನಿರ್ಮಾಣಕ್ಕೆ ಯುವ ಪೀಳಿಗೆಯ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ವಿವಿಧ ಶಾಲೆ-ಕಾಲೇಜು ವಿಭಾಗದಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಿಸಲಾಯಿತು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.