ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಹೊಣೆ

ಚಿಕ್ಕಮಗಳೂರು: ಸಂವಿಧಾನದ ಆಶಯಗಳು 70 ವರ್ಷ ಕಳೆದರೂ ಸಮರ್ಪಕವಾಗಿ ಈಡೇರದಿರಲು ಕಾಂಗ್ರೆಸ್ ಕಾರಣ ಎಂದು ರಾಜ್ಯ ಬಿಜೆಪಿ ಎಸ್​ಸಿ ಮೋರ್ಚಾದ ಅಧ್ಯಕ್ಷ ಡಿ.ಎಸ್.ವೀರಯ್ಯ ಆರೋಪಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 128ನೇಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಅವರನ್ನು ಅಪಮಾನಿಸುವ ಕೆಲಸ ಕಾಂಗ್ರೆಸ್​ನಿಂದಾಗಿದೆ ಎಂದು ದೂರಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸಂವಿಧಾನದ ಮೂಲಕ ಸಮಾನತೆ ಎತ್ತಿ ಹಿಡಿದಿರುವ ಅಂಬೇಡ್ಕರ್ ಎಲ್ಲರ ದೇವರಂತೆ ಕಾಣುತ್ತಾರೆ. ಇದು ಹೊಗಳಿಕೆ ಅಥವಾ ಉತ್ಪ್ರೇಕ್ಷೆಯಲ್ಲ. ಸಂವಿಧಾನದ ವಿಚಾರದಲ್ಲಿ ನಮಗಿರುವುದು ನಿಜವಾದ ಬದ್ಧತೆ. ಕೇವಲ ಘೊಷಣೆಯಲ್ಲ. ದೇಶ ಬದಲಾಗಬೇಕೆಂಬುದು ಪಕ್ಷದ ಗುರಿ. ಅದಕ್ಕೆ ಎಲ್ಲ ವರ್ಗದ ಜನರನ್ನೂ ಸೇರಿಸಿ ನಮ್ಮ ದೌರ್ಬಲ್ಯ ದೂರವಿಟ್ಟು ಒಂದಾಗಬೇಕೆನ್ನುವ ಬದ್ಧತೆಯನ್ನು ನರೇಂದ್ರ ಮೋದಿ ತೋರುತ್ತಿದ್ದಾರೆ ಎಂದರು.

ಎಸ್​ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಜೆ.ಡಿ.ಲೋಕೇಶ್, ಜಿಪಂ ಸದಸ್ಯ ಹಿರಿಗಯ್ಯ, ನಗರ ಅಧ್ಯಕ್ಷ ರಾಜ್​ಕುಮಾರ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ವೆಂಕಟೇಶ್, ಹಂಪಯ್ಯ ಇದ್ದರು.