ನವದೆಹಲಿ: ಹೆಚ್ಚೂಕಡಿಮೆ ಆರು ತಿಂಗಳ ಕಾಲ ಕರೊನಾ ಹೊಡೆತಕ್ಕೆ ಒಳಗಾಗಿರುವ ದೇಶದಲ್ಲಿ ಇದೀಗ ಸೋಂಕಿನ ಪ್ರಮಾಣ ಇಳಿಮುಖ ಆಗುತ್ತಿರುವುದಷ್ಟೇ ಅಲ್ಲ, ಎರಡು ತಿಂಗಳಲ್ಲೇ ಅತಿ ಕಡಿಮೆ ಎನ್ನುವಷ್ಟು ಹೊಸ ಪ್ರಕರಣ ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 55,342 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದೆರಡು ತಿಂಗಳಲ್ಲೇ ಅತಿ ಕಡಿಮೆ ಎನಿಸಿಕೊಂಡಿದೆ. ಆಗಸ್ಟ್ 18ರಂದು 55,079 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದು, ದಿನಕ್ಕೆ 90 ಸಾವಿರ ಆಸುಪಾಸಿನಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುವಷ್ಟರ ಮಟ್ಟಿಗೆ ಸೋಂಕು ಹೆಚ್ಚಾಗಿತ್ತು. ಆದರೆ ಸುಮಾರು ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ 55 ಸಾವಿರದಷ್ಟು ಹೊಸ ಪ್ರಕರಣ ಪತ್ತೆಯಾಗಿದ್ದು, ಆಶಾಭಾವನೆ ಮೂಡಿಸಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿನ ಪ್ರಮಾಣ 71.75 ಲಕ್ಷಕ್ಕೆ ತಲುಪಿದೆ.
ಇನ್ನೊಂದೆಡೆ ಸೋಂಕಿನ ಪ್ರಮಾಣದಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಸಂಚಿತ ಸೋಂಕಿನ ಪ್ರಮಾಣ ಶೇ. 8.07, ಸಾಪ್ತಾಹಿಕ ಸೋಂಕಿನ ಪ್ರಮಾಣ ಶೇ. 6.24, ದೈನಂದಿನ ಪ್ರಮಾಣ ಶೇ. 5.16ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. (ಏಜೆನ್ಸೀಸ್)