ರಸ್ತೆಬದಿ ಬಿದ್ದಿದ್ದ ವೃದ್ಧನ ಉಪಚರಿಸಿ ಮಾನವೀಯತೆ ಮೆರೆದ ಕಾನ್‌ಸ್ಟೇಬಲ್

ಮಂಗಳೂರು: ಹಸಿವು ಹಾಗೂ ಬಿಸಿಲಿನ ಬೇಗೆಗೆ ಬಸವಳಿದು ರಸ್ತೆಬದಿ ಬಿದ್ದಿದ್ದ ವೃದ್ಧರೊಬ್ಬರಿಗೆ ಗುರುವಾರ ಸಂಚಾರಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಉಪಚರಿಸಿ ನೀರು, ಬ್ರೆಡ್ ನೀಡಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ಸುಮಾರು 65 ವರ್ಷದ ವೃದ್ಧರೊಬ್ಬರು ಕುಸಿದು ಬಿದ್ದಿದ್ದರು. ಇದನ್ನು ನೋಡಿದ ಸಾರ್ವಜನಿಕರೊಬ್ಬರು ಸಮೀಪದ ಮಹಾಕಾಳಿ ಪಡ್ಪುವಿನಲ್ಲಿ ಕರ್ತವ್ಯದಲ್ಲಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಭಾಗ್ಯಶ್ರೀ ಗಮನಕ್ಕೆ ತಂದಿದ್ದಾರೆ. ಅವರು ತಕ್ಷಣ ವೃದ್ಧ ಬಿದ್ದಿದ್ದ ಸ್ಥಳಕ್ಕೆ ಬಂದಿದ್ದಾರೆ.

ಸೇತುವೆ ಮೇಲೆ ಬಿದ್ದಿದ್ದ ಆ ವ್ಯಕ್ತಿಯನ್ನು ಕರೆದಾಗ ನಿತ್ರಾಣದಿಂದ ಪ್ರತಿಕ್ರಿಯಿಸಲು ಅಸಾಧ್ಯವಾದ ಸ್ಥಿತಿ ಅವರದ್ದಾಗಿತ್ತು. ಭಾಗ್ಯಶ್ರೀ ವ್ಯಕ್ತಿಗೆ ಕುಡಿಯುಲು ನೀರು ನೀಡಿ ಉಪಚರಿಸಿದ್ದಾರೆ. ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆಟೋ ಚಾಲಕರೊಬ್ಬರು ಹಣ್ಣು ನೀಡಿದ್ದಾರೆ. ಅದನ್ನು ತಿಂದ ಬಳಿಕ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಮನವೊಲಿಕೆ: ಅಸಹಾಯಕ ವೃದ್ದನನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದು, ಪೊಲೀಸ್ ಮನವೊಲಿಕೆ ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಮಹಾಕಾಳಿ ಪಡ್ಪು ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನೇತ್ರಾವತಿ ಸೇತುವೆ ಮೇಲೆ ವೃದ್ದರೊಬ್ಬರು ಬಿದ್ದುಕೊಂಡಿರುವ ಮಾಹಿತಿ ತಿಳಿದು ಅವರನ್ನು ಉಪಚರಿಸಿ, ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇನೆ. ಮನುಷ್ಯರಾಗಿ ಮನುಷ್ಯರಿಗೆ ಸಹಾಯ ಮಾಡುವುದು ನಮ್ಮ ಧರ್ಮ.

ಭಾಗ್ಯಶ್ರೀ ಟ್ರಾಫಿಕ್ ಕಾನ್‌ಸ್ಟೇಬಲ್