ಖಾನಾಪುರ: ಇತ್ತೀಚಿನ ಮಳೆಗೆ ಸಂಪೂರ್ಣವಾಗಿ ಹಾಳಾಗಿರುವ ತಾಲೂಕಿನ 9 ಸಂಪರ್ಕ ರಸ್ತೆಗಳ ದುರಸ್ತಿಗೆ ಅನುದಾನ ಮಂಜೂರು ಮಾಡುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೆರಿ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದ ಪದಾಕಾರಿಗಳು ಎಂಎಲ್ಸಿ ಮಹಾಂತೇಶ ಕವಟಗಿಮಠ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಪುರ ಗ್ರಾಮದಿಂದ ಅಳ್ನಾವರ ಪಟ್ಟಣದವರೆಗೆ, ಬಿಳಕಿ ಗ್ರಾಮದಿಂದ ರುದ್ರಸ್ವಾಮಿ ಮಠದ ಮೂಲಕ ಬಂಕಿ-ಬಸರಿಕಟ್ಟಿ ಗ್ರಾಮದವರೆಗೆ, ಇಟಗಿ ಗ್ರಾಮದಿಂದ ಮಲಪ್ರಭಾ ನದಿಯವರೆಗೆ, ಅಮಟೆ ಗ್ರಾಮದಿಂದ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿವರೆಗೆ, ಚನ್ನೇವಾಡಿ ಗ್ರಾಮದಿಂದ ಹಲಸಿಕ್ರಾಸ್ ವರೆಗೆ, ಪಾರಿಶ್ವಾಡದಿಂದ ಬಿದರಬಾವಿ ವರೆಗೆ, ಕೊಡಚವಾಡ ಗ್ರಾಮದಿಂದ ಮಲಪ್ರಭಾ ನದಿಯವರೆಗೆ, ನೇರಸಾ ಗ್ರಾಮದಿಂದ ಹೆಮ್ಮಡಗಾ ಕ್ರಾಸ್ವರೆಗೆ ಮತ್ತು ಕುಸಮಳಿಯಿಂದ ಬೈಲೂರು ಗ್ರಾಮದವರೆಗೆ ರಸ್ತೆಗಳ ಅಭಿವೃದ್ಧಿಗೆ ಒಟ್ಟು 110 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವಂತೆ ಪಕ್ಷದ ಮುಖಂಡರು ಮನವಿಯ ಮೂಲಕ ಕವಟಗಿಮಠ ಅವರನ್ನು ಕೋರಿದ್ದಾರೆ.
ಮನವಿ ಸ್ವೀಕರಿಸಿರುವ ಕವಟಗಿಮಠ ಅವರು ಶೀಘ್ರ ಈ ರಸ್ತೆಗಳಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಮಂಜೂರುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಾಲೂಕಿನ ನಿಯೋಗಕ್ಕೆ ಭರವಸೆ ನೀಡಿದ್ದಾರೆ.