ಸಂಪರ್ಕ ರಸ್ತೆಯಲ್ಲಿ ಗುಂಡಿ ಗಂಡಾಂತರ!

ಡಿ.ಪಿ.ಮಹೇಶ್ ಯಳಂದೂರು
ಎರಡು ವರ್ಷಗಳ ಹಿಂದೆ ಎನ್.ಮಹೇಶ್ ಸಂತೆಮರಹಳ್ಳಿಯಿಂದ ಮೂಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸರಿಯಿಲ್ಲ ಎಂದು ರಸ್ತೆಯ ಹಳ್ಳಗಳಿಗೆ ಮಣ್ಣನ್ನು ಹಾಕುವ ಮೂಲಕ ಪ್ರತಿಭಟಿಸಿದ್ದರು. ಆದರೆ ಪ್ರಸ್ತುತ ಅವರು ಶಾಸಕರಾಗಿ ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಈ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ.

ಬೆಂಗಳೂರಿನಿಂದ ದಿಂಡಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209 ಹಾಗೂ ಮೈಸೂರು, ಕೊಳ್ಳೇಗಾಲ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 211 ಇದನ್ನು ಜೋಡಿಸುವ ಸಂತೆಮರಹಳ್ಳಿಯಿಂದ ಮೂಗೂರು ಗ್ರಾಮದ ಬಳಿಗೆ ಸಂಪರ್ಕ ಕಲ್ಪಿಸುವ ಸುಮಾರು 8 ಕಿ.ಮಿ ರಸ್ತೆ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿದ್ದು ಇದನ್ನು ದಾಟಲು ಅರ್ಧ ಗಂಟೆಗೂ ಹೆಚ್ಚು ಸಮಯ ವ್ಯರ್ಥವಾಗುವ ಸ್ಥಿತಿ ಇದೆ.

ಈ ರಸ್ತೆ ಅತ್ತ ರಾಜ್ಯ ಹೆದ್ದಾರಿಯೂ ಅಲ್ಲದೆ, ಇತ್ತ ರಾಷ್ಟ್ರೀಯ ಹೆದ್ದಾರಿಗೂ ಸೇರದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ವಾಹನ ಸಂಚಾರ ದುಸ್ತರವಾಗುತ್ತಿದೆ. ಈ ಹಿಂದೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನಕ್ಕೆ ಕೈಹಾಕಲಾಗಿದ್ದರೂ, ಆ ಪ್ರಯತ್ನ ಈವರೆಗೂ ಈಡೇರಿಲ್ಲ. ಸಂತೆಮರಹಳ್ಳಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರುವ ಜಂಕ್ಷನ್ ಆಗಿದೆ. ಇಲ್ಲಿಂದ ಚಾಮರಾಜನಗರದ ಮಾರ್ಗವಾಗಿ ತಮಿಳುನಾಡಿಗೆ ಸೇರುವ, ಗುಂಡ್ಲುಪೇಟೆ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡುಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಹಾದು ಹೋಗುತ್ತವೆ. ಮೈಸೂರು ಮಾರ್ಗವಾಗಿ ಅನೇಕ ಸರಕು ಸಾಗಣೆ ವಾಹನಗಳು ಸಂಚರಿಸುವುದೇ ಇಲ್ಲಿಂದ. ರೈತರು ಬೆಳೆದ ತರಕಾರಿಗಳನ್ನು ಸಾಗಿಸುವ ವಾಹನಗಳು ತೆರಳುವುದು ಈ ಮಾರ್ಗದಲ್ಲೆ.

ಸಂತೆಮರಹಳ್ಳಿ ಗ್ರಾಮದ ಸೆಸ್ಕ್ ಕಚೇರಿಯ ಬಳಿಯಿಂದ ಮೂಗೂರು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 211ರ ತನಕವೂ ಈ ರಸ್ತೆ ತುಂಬಾ ಹಾಳಾಗಿದೆ. ಬಾಣಹಳ್ಳಿ ಗೇಟ್ ಬಳಿಯಲ್ಲಿ ದೊಡ್ಡ ಹಳ್ಳಗಳು ಬಿದ್ದಿದ್ದು ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಇಲ್ಲಿಂದ ಮುಂದೆ ರಸ್ತೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು ಒಂದೂವರೆ ಅಡಿಗೂ ಹೆಚ್ಚು ಆಳವಾಗಿದೆ. ಹಾಗಾಗಿ ಒಂದು ಭಾಗ ಉಬ್ಬಿದ್ದರೆ ಮತ್ತೊಂದು ಭಾಗ ಹಳ್ಳದಿಂದ ಕೂಡಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಸ್ಥಳದಲ್ಲಿ ಈಚೆಗೆ ಟ್ರ್ಯಾಕ್ಟರ್‌ವೊಂದು ಮಗುಚಿಕೊಂಡಿತ್ತು.

ಈ ರಸ್ತೆ ಹಳ್ಳಬಿದ್ದು ವರ್ಷವೇ ಉರುಳಿದೆ. ದುರಸ್ತಿ ಹೆಸರಿನಲ್ಲಿ ಲೋಕೋಪಯೋಗಿ ಇಲಾಖೆ ಲಕ್ಷಾಂತರ ಹಣ ವಿನಿಯೋಗಿಸಿ ಪೋಲು ಮಾಡಿದೆ. ಇದರ ಬದಲು ಹೊಸ ರಸ್ತೆ ನಿರ್ಮಾಣ ಮಾಡಿದರೆ ಇಲ್ಲಿನ ಜನರ ಬವಣೆ ನೀಗುವ ಜೊತೆಗೆ ನಮಗೂ ಕೂಡ ಅನುಕೂಲವಾಗುತ್ತದೆ. ಈಗ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳನ್ನಿಟ್ಟು ಜನರು ಎನ್.ಮಹೇಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರೂ ಕೂಡ ಮೈಸೂರಿಗೆ ಇದೇ ಮಾರ್ಗವಾಗಿ ತೆರಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ರಸ್ತೆಯನ್ನು ದುರಸ್ತಿ ಮಾಡುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸಿ ರಸ್ತೆ ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

ಈ ರಸ್ತೆಗೆ 2 ಬಾರಿ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಆದರೂ ಹಳ್ಳಗಳ ನಿಯಂತ್ರಣ ಸಾಧ್ಯವಾಗಿಲ್ಲ ಹೊಸದಾಗಿ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದ್ದು ಕೆಲಸ ಆರಂಭಿಸಲಾಗುವುದು.
ಎನ್.ಮಹೇಶ್ ಶಾಸಕ

ಸಂತೆಮರಹಳ್ಳಿಯಿಂದ ಮೂಗೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ದುರಸ್ತಿಯಾಗದೆ ಸವಾರರಿಗೆ ತೊಂದರೆಯಾಗುತ್ತಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಸಾರ್ವಜನಿಕರಿಗೆ ಅಪಾಯದ ಆತಂಕ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳು ಇತ್ತ ಗಮನ ಹರಿಸಿ ಶೀಘ್ರ ರಸ್ತೆ ಸರಿಪಡಿಸಬೇಕು.
ಮಹದೇವಸ್ವಾಮಿ ಗ್ರಾಮಸ್ಥ, ಸಂತೆಮರಹಳ್ಳಿ

Leave a Reply

Your email address will not be published. Required fields are marked *