ಕೈ ಕಾರ್ಯಕರ್ತನ ಆತ್ಮಹತ್ಯೆ ಯತ್ನ

ವಿಜಯವಾಣಿ ಸುದ್ದಿಜಾಲ ಕಲಬುರಗಿ/ಜೇವರ್ಗಿ/ಚಿಂಚೋಳಿ
ಸಂಪುಟದಲ್ಲಿ ತಮ್ಮ ನಾಯಕರಿಗೆ ಸ್ಥಾನ ಸಿಗದಿದ್ದಕ್ಕೆ ಜಿಲ್ಲೆಯ ಹಲವೆಡೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿಡಿದೆದ್ದ ಕಾರ್ಯಕರ್ತರು ಬೀದಿಗಿಳಿದು ಟೈರ್​ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ. ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ಮನನೊಂದ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪುನಾರಚನೆಯಾದ ಸಂಪುಟದಲ್ಲಿ ಮಾಜಿ ಸಿಎಂ ದಿ. ಎನ್.ಧರ್ಮಸಿಂಗ್ ಪುತ್ರ ಶಾಸಕ ಡಾ.ಅಜಯಸಿಂಗ್ ಮತ್ತು ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಅವರಿಗೆ ಮಂತ್ರಿಸ್ಥಾನ ಸಿಗಬಹುದೆಂದು ಭಾವಿಸಲಾಗಿತ್ತು. ಆದರೆ ಹೈಕಮಾಂಡ್ ಕಲಬುರಗಿ ಜಿಲ್ಲೆಯನ್ನು ನಿರ್ಲಕ್ಷಿಸಿದೆ ಎಂದು ಬೆಂಬಲಿಗರು ಶನಿವಾರ ಬೆಳಗ್ಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್, ಸೊನ್ನ ಕ್ರಾಸ್, ಜೇರಟಗಿ ಮತ್ತು ಜೇವರ್ಗಿ ಪಟ್ಟಣದಲ್ಲಿ ಪ್ರತಿಭಟನೆಗೆ ಇಳಿದ ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ಕಡೆ ಟೈರ್​ಗಳಿಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಜೇವರ್ಗಿಯಲ್ಲಿ ಯುವಕ ಮುಜೀಮ್ ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾನೆ.
ಎರಡನೇ ಬಾರಿ ಶಾಸಕರಾಗಿರುವ ಡಾ.ಉಮೇಶ ಜಾಧವ್ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು, ಚಿಂಚೋಳಿಯಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿದರು. 200ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉದ್ರಿಕ್ತ ಕೆಲ ಕಾರ್ಯಕರ್ತರು ಪಕ್ಷವನ್ನೇ ತ್ಯಜಿಸುವಂತೆ ಶಾಸಕ ಡಾ.ಜಾಧವ್ ಅವರಿಗೆ ಸಲಹೆ ನೀಡಿದ್ದಾರೆ. ಈ ಮಧ್ಯೆ ಪ್ರತಿಭಟನೆ ಮಾಡದಂತೆ ಡಾ.ಅಜಯಸಿಂಗ್ ಮತ್ತು ಡಾ.ಉಮೇಶ ಜಾಧವ್ ತಮ್ಮ ತಮ್ಮ ಕ್ಷೇತ್ರಗಳ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ. ಆದ್ದರಿಂದ ಯಾರೂ ಪ್ರತಿಭಟನೆ ನಡೆಸುವುದಾಗಲಿ, ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದಾಗಲಿ ಮಾಡಬಾರದು ಎಂದು ಕೋರಿದ್ದಾರೆ.
ಈ ಇಬ್ಬರಿಗೆ ಮಂತ್ರಿ ಸ್ಥಾನ ಸಿಗದಿರುವುದರ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕೈವಾಡ ಇದೆ ಎಂದು ಕಾರ್ಯಕರ್ತರು ಆರೋಪಿಸಿದರು. ಇವರು ಮಂತ್ರಿಗಳಾದರೆ ತಮ್ಮ ಪುತ್ರನ ರಾಜಕೀಯ ಬೆಳವಣಿಗೆ ಆಗಲಿಕ್ಕಿಲ್ಲ ಎಂಬ ಭಯ ಖಗರ್ೆ ಅವರನ್ನು ಕಾಡುತ್ತಿದೆ ಎಂದು ದೂರಿದರು.

ಅತೃಪ್ತಿ ಇದ್ದರೂ ಪಕ್ಷ ತೊರೆಯಲ್ಲ

ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ನ ಮೂವರು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಎರಡು ಇಲ್ಲವೇ ಮೂರು ಸಚಿವರನ್ನು ಕಾಣುತ್ತಿದ್ದ ಕಲಬುರಗಿ ಜಿಲ್ಲೆಯಲ್ಲಿ ಈ ಸಲ ಒಬ್ಬರೇ ಸಚಿವರಿದ್ದು, ಇನ್ನೂ ಒಬ್ಬರಿಗೆ ಅವಕಾಶ ಸಿಗಬೇಕಿತ್ತು. ಆದರೆ ಯಾವುದೋ ಒತ್ತಡದಿಂದ ಇನ್ನೊಂದು ಸಚಿವ ಸ್ಥಾನ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜೇವರ್ಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ಧಲಿಂಗರಡ್ಡಿ ಪಾಟೀಲ್ ಇಟಗಿ, ಪ್ರಮುಖರಾದ ರಾಜಶೇಖರ ಸೀರಿ, ಸಕ್ರೇಪ್ಪಗೌಡ ಹರನೂರ, ಸಿದ್ದು ಯಂಕಂಚಿ, ಷಣ್ಮುಖಪ್ಪಗೌಡ ಮಾಲಿಪಾಟೀಲ್, ಗುರುಲಿಂಗಯ್ಯ ಹಿರೇಮಠ, ನೀಲಕಂಠ ಹಳಿಮನಿ, ಸೈಯದ್ ಫಯಾಜುದ್ಧೀನ್ ಜಮಾದಾರ್, ಮರೆಪ್ಪ ಸರಡಗಿ, ಮಲ್ಲಿಕಾಜರ್ುನ ಬೂದಿಹಾಳ, ವಿಶ್ವರಾಧ್ಯ ಮಾಯಾ, ಪ್ರಕಾಶ ಪುಲಾರೆ, ಸುರೇಶ ಹವಾಲ್ದಾರ್, ಅಮೀರಸಾಬ್ ಜಮಾದಾರ, ಖಾಜಪ್ಪ ದೊರೆ ಇತರರಿದ್ದರು. ಚಿಗರಹಳ್ಳಿಯಲ್ಲಿನ ಪ್ರತಿಭಟನೆಯಲ್ಲಿ ಖಾಸೀಂ ಪಟೇಲ್ ಮುದವಾಳ, ಹಬೀಬ್ ಪಟೇಲ್ ಯಾಳವಾರ, ಪ್ರಭು ಸಾಹು ಯಾಳವಾರ, ಮಶಾಕ್ ಬಾಷಾ ಜಹಾಗೀರದಾರ್, ಮಹ್ಮದ್ ಸೋಫಿ ಸಗರಿ, ಚಾಂದ್ಪಾಷಾ ಜಮಾದಾರ, ಮಾನಪ್ಪ ಚಿಗರಹಳ್ಳಿ, ಸಂತೋಷ ಪಡಶೆಟ್ಟಿ ಇದ್ದರು. ಸೊನ್ನ ಕ್ರಾಸ್ನಲ್ಲಿ ಶರಣು ಕಲ್ಯಾಣಿ, ಬಾಬುಗೌಡ ಪಾಟೀಲ್ ಕಲ್ಲಹಂಗರಗಾ, ವಿಜಯಕುಮಾರ ಬಿರಾದಾರ, ನಬಿಸಾಬ್ ಬಾಗಬಾನ್, ಸುನೀಲ ಸರ್ದಾರ, ನಾಗಣ್ಣಗೌಡ ಮಾಲಿಪಾಟೀಲ್, ರಾಜು ಮುದ್ದಾ, ಭೀಮು ಕಾಚಾಪುರ, ಶರಣು ಕಲಬುರಗಿ ಇತರರು ಪ್ರತಿಭಟನೆ ನಡೆಸಿದರು.

ಅಸ್ವಸ್ಥ ಬೆಂಬಲಿಗನಿಗೆ ಚಿಕಿತ್ಸೆ

ಶಾಸಕ ಡಾ.ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಮನನೊಂದು ಶಾಸಕರ ಬೆಂಬಲಿಗ, ಕಾಂಗ್ರೆಸ್ ಕಾರ್ಯಕರ್ತ ಮಜೀಮ್ ಜೇವರ್ಗಿ (ಕೆ) ಎಂಬಾತ ಜೇವರ್ಗಿಯಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲೇ ವಿಷ ಸೇವಿಸಿ, ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಕಲಬುರಗಿ ಗ್ರಾಮೀಣ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಭೇಟಿ ನೀಡಿ ಮುಜೀಮ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಆತ್ಮಹತ್ಯೆ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ. ಸಿಪಿಐ ಡಿ.ಬಿ.ಪಾಟೀಲ್, ಮರೆಪ್ಪ ಸರಡಗಿ ಇದ್ದರು.

ಚಿಂಚೋಳಿ: ಕಾಂಗ್ರೆಸ್ನ ನಿಷ್ಠಾವಂತ ಶಾಸಕ, ಎರಡನೇ ಅವಧಿಗೆ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಡಾ.ಉಮೇಶ ಜಾಧವ್ ಅವರಿಗೆ ಸಚಿವ ಸ್ಥಾನ ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಅಮರ ಲೊಡ್ಡನೂರ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಗೋಪಾಲರಾವ ಕಟ್ಟಿಮನಿ, ಅಬ್ದುಲ್ ಬಾಸೀದ್, ಜಗದೇವ ಗೌತಮ, ಮಲ್ಲಿಕಾರ್ಜುನ ಕೊಟಪಲ್ಲಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ್, ಮಹ್ಮದ್ ಹಾದಿ, ರಾಮಶೆಟ್ಟಿ ಪವಾರ, ಕೃಷ್ಣ ಬಿರಾಪೂರ್, ಶರಣಗೌಡ ಮದ್ದಾ, ಮಹ್ಮದ್ ಶಬ್ಬೀರ್, ಬಸವರಾಜ ಕಡಬೂರ್, ಮತೀನ ಸೌದಾಗಾರ, ರಾಜಕುಮಾರ ಪವಾರ್, ಅಯೂಬ್ಖಾನ್, ಸಂತೋಷ ಗುತ್ತೇದಾರ, ವಿಶ್ವನಾಥ ಬೇನಕಿನ್, ಪಾಂಡುರಂಗ ಲೊಡ್ಡನೂರ್, ಮಾಣಿಕಪ್ಪ ಭೋಗವಂತಿ, ಇತರರಿದ್ದರು.