ಕಾಂಗ್ರೆಸ್‌ನೊಳಗೆ ಗೂಂಡಾಗಳಿಗೆ ಮನ್ನಣೆ ಸಿಗುತ್ತಿದೆ ಎಂದು ಪಕ್ಷ ತೊರೆದ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕ ಚತುರ್ವೇದಿ

ನವದೆಹಲಿ: ಟ್ವೀಟ್‌ನಲ್ಲಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕ ಚತುರ್ವೇದಿ ತಡರಾತ್ರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಿಯಾಂಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಪಕ್ಷದ ಕಾರ್ಯಕರ್ತನನ್ನು ಪಕ್ಷಕ್ಕೆ ಮರಳಿ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಪಕ್ಷದ ಮುಖ್ಯಸ್ಥರ ವಿರುದ್ಧ ಅಸಮಾಧಾನಗೊಂಡಿದ್ದ ಪ್ರಿಯಾಂಕ, ಕಾಂಗ್ರೆಸ್‌ಗಾಗಿ ತಮ್ಮ ಬೆವರು ಮತ್ತು ರಕ್ತವನ್ನು ಹರಿಸಿದ್ದವರನ್ನು ಮೂಲೆಗುಂಪು ಮಾಡಿ ಗೂಂಡಾಗಳಿಗೆ ಕಾಂಗ್ರೆಸ್‌ನಲ್ಲಿ ಮನ್ನಣೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬೇಸರದಿಂದ ತಡರಾತ್ರಿ ಪಕ್ಷವನ್ನು ತೊರೆದಿದ್ದಾರೆ.

ಬೆವರು ಮತ್ತು ರಕ್ತವನ್ನು ನೀಡಿದವರಿಗೆ ಬೆಲೆ ನೀಡದೆ ಗೂಂಡಾಗಳಿಗೆ ಕಾಂಗ್ರೆಸ್‌ನಲ್ಲಿ ಮನ್ನಣೆ ನೀಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಪಕ್ಷದೊಳಗೆ ನಾನು ಕಟುಟೀಕೆ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ಎದುರಿಸಬೇಕಾಯಿತು. ಆದರೆ, ನನಗೆ ಬೆದರಿಕೆಯೊಡ್ಡಿದವರಿಂದು ಕನಿಷ್ಠ ಹೆದರಿಕೆಯೂ ಇಲ್ಲದೆ ಪಕ್ಷಕ್ಕೆ ಮರಳಿರುವುದು ದುರದೃಷ್ಟಕರ ಎಂದು ಟ್ವೀಟ್‌ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರಫೇಲ್‌ ಡೀಲ್‌ ಕುರಿತಾಗಿ ಮಥುರಾದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದ ವೇಳೆ ಸ್ಥಳೀಯ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಚತುರ್ವೇದಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಈ ವೇಳೆ ಆತನನ್ನು ಕಾಂಗ್ರೆಸ್‌ ಪಕ್ಷದಿಂದ ತೆಗೆದುಹಾಕಿತ್ತು. ಆದರೆ, ಇದೀಗ ಚುನಾವಣೆ ಅಂಗವಾಗಿ ಸ್ಥಳೀಯ ಬೆಂಬಲಕ್ಕಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *