More

    ನೇಮಕ ಸಂಪ್ರದಾಯಕ್ಕೆ ಇತಿಶ್ರೀ!; ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಚುನಾವಣೆ ಘೋಷಣೆ ; ಸದಸ್ಯತ್ವ ಅಭಿಯಾನ ಬಳಿಕ ಏಪ್ರಿಲ್‌ನಲ್ಲಿ ಎಲೆಕ್ಷನ್

    ತುಮಕೂರು : ಯುವ ಕಾಂಗ್ರೆಸ್ ಚುನಾವಣೆ ವಿವಾದವು ಹಸಿರಾಗಿರುವಾಗಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನದವರೆಗೆ ಸಾಂಸ್ಥಿಕ ಚುನಾವಣೆ ನಡೆಸಲು ಸಿದ್ಧತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಇದರೊಂದಿಗೆ ಕಾಂಗ್ರೆಸ್‌ನಲ್ಲಿ ನೇಮಕ ಸಂಪ್ರದಾಯಕ್ಕೆ ಇತಿಶ್ರೀ ಹಾಡಲು ಎಐಸಿಸಿ ನಿರ್ಧರಿಸಿದೆ.

    ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಿಂದ ಸದಸ್ಯತ್ವ ಅಭಿಯಾನ ಆರಂಭಿಸಿದ್ದು 2022ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಅಭಿಯಾನ ಪೂರ್ಣಗೊಂಡ ಬಳಿಕ 4 ಹಂತದಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ ಘೋಷಣೆ ಆಗಲಿದೆ.

    4 ಹಂತದ ಚುನಾವಣೆ: ಏಪ್ರಿಲ್ 1ರಂದು ಸಾಂಸ್ಥಿಕ ಚುನಾವಣೆ ಘೋಷಣೆ ಆಗಲಿದ್ದು, ಮೊದಲ ಹಂತದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಓರ್ವ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. 2ನೇ ಹಂತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲಾಗುವುದು. 3ನೇ ಹಂತದಲ್ಲಿ ಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷರು, ಖಜಾಂಚಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಆಯ್ಕೆಗೆ ಮತ್ತು ಪಿಸಿಸಿ ಸಾಮಾನ್ಯ ಸಭೆಯಿಂದ ಎಐಸಿಸಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದಾದ ಬಳಿಕ ಆಗಸ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದೆ. 4ನೇ ಹಂತದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಇತರ ಅಂಗ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎಐಸಿಸಿ ಸದಸ್ಯರ ಹಕ್ಕು ಚಲಾಯಿಸಲಿದ್ದು ಎಐಸಿಸಿ ಮಹಾ ಅಧಿವೇಶನದಲ್ಲಿ ಈ ಪ್ರಕ್ರಿಯೆ ಪ್ರಜಾಪ್ರಭುತ್ವ ವ್ಯವಸ್ಥೆ ರೀತಿಯಲ್ಲಿ ನಡೆಯಲಿದೆ.

    ಸಾಂಸ್ಥಿಕ ಚುನಾವಣೆ ರಾಹುಲ್ ಕನಸು! : ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒತ್ತುಕೊಡುವ ಜತೆಗೆ ಯುವ ನಾಯಕರು ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ರಾಹುಲ್‌ಗಾಂಧಿ ಪಕ್ಷದೊಳಗೆ ಸಾಂಸ್ಥಿಕ ಚುನಾವಣೆಗೆ ಚಾಲನೆ ಕೊಟ್ಟರು. ಹಾಗಾಗಿ, 2010 ರಿಂದ ಪ್ರತೀ 3 ವರ್ಷಕ್ಕೊಮ್ಮೆ ಯುವ ಕಾಂಗ್ರೆಸ್, ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯುತ್ತಾ ಬಂದಿದೆ. ಸದಸ್ಯತ್ವ ಅಭಿಯಾನ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯುವಕರು ಈ ಚುನಾವಣೆಯಲ್ಲಿ ಭಾಗಿಯಾಗಲು ಸಾಧ್ಯವಾಗಿತ್ತು.

    ಗುಂಪುಗಾರಿಕೆ ಸೃಷ್ಟಿ : ಯುವ ಕಾಂಗ್ರೆಸ್ ಚುನಾವಣೆ ಈ ಹಿಂದೆ ಬ್ಯಾಲೆಟ್ ಪೇಪರ್‌ನಲ್ಲಿ ನಡೆದಿತ್ತು. ಆದರೆ, ಕಳೆದ ಜನವರಿಯಲ್ಲಿ ಕರೊನಾ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ನಡೆದ ಚುನಾವಣೆ ಗೊಂದಲದ ಗೂಡಾಗಿತ್ತು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶದ ಗೊಂದಲವು ಇಡೀ ದೇಶದ ಗಮನಸೆಳೆದಿತ್ತು. ಈ ಚುನಾವಣೆ ಪಕ್ಷದೊಳಗೆ ಬಣ ಸೃಷ್ಟಿಗೆ ಕಾರಣವಾಗಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಬಣಗಳ ಯುವ ಹುರಿಯಾಳುಗಳನ್ನು ಬೆಂಬಲಿಸಿದ್ದು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಸೃಷ್ಟಿಸಿತ್ತು.

    ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದ ನಿಷ್ಠಾವಂತ ಯುವ ಕಾರ್ಯಕರ್ತರಿಗೆ ಆಂತರಿಕ ಚುನಾವಣೆ ಪದಾಧಿಕಾರಿ ಸ್ಥಾನಕ್ಕೇರುವ ಅವಕಾಶ ಕಲ್ಪಿಸಿದೆ. ಸಾಂಸ್ಥಿಕ ಚುನಾವಣೆಯಿಂದ ಪದಾಧಿಕಾರಿಗಳ ಹುದ್ದೆಗೆ ಹಿಂಬಾಲಕರನ್ನು ನೇಮಿಸುವ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ಪಕ್ಷ ಸೇವೆಗೆ ಎಲ್ಲರಿಗೂ ಅವಕಾಶ ದೊರೆಯಲಿದೆ.
    ಶಶಿಹುಲಿಕುಂಟೆ ಮಠ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts