ಪೇಚಿಗೆ ಸಿಲುಕಿದ ಕೈ ಮುಖಂಡರು

ಬಾಗಲಕೋಟೆ: ಮಾತು ಮನೆ ಕೆಡಿಸಿತು ಎಂಬ ನಾಣ್ನುಡಿಯಂತೆ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಪ್ರಭಾವಿ ಮುಖಂಡರು ಹೇಳಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಉಪಚುನಾವಣೆಯಲ್ಲಿ ಗೆದ್ದಿರುವ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅನಗತ್ಯವಾಗಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಹೇಳಿಕೆಗಳ ವಿಡಿಯೋ ವೈರಲ್: ಇಬ್ಬರು ಜನಪ್ರತಿನಿಧಿಗಳು ಸಾರ್ವಜನಿಕ ವಾಗಿ ಮಾಡಿದ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎರಡು ಸಮುದಾಯಗಳನ್ನು ಉದ್ದೇಶಿಸಿ ಆಡಿದ್ದಾರೆ ಎನ್ನಲಾದ ಮಾತುಗಳು ಆಯಾ ಸಮುದಾಯಗಳ ಜನರ ಕಣ್ಣು ಕೆಂಪಾಗಿಸಿದೆ. ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಮಾತುಗಳು ಕೇಳಿ ಬರುತ್ತಿವೆ.

ಆನಂದ ನ್ಯಾಮಗೌಡ ವಿವಾದಾತ್ಮಕ ಹೇಳಿಕೆ: ಮೊನ್ನೆ ಮೊನ್ನೆಯಷ್ಟೇ ಜಮಖಂಡಿ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಆನಂದ ನ್ಯಾಮಗೌಡ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಜಮಖಂಡಿ ಅಲ್ಪಸಂಖ್ಯಾತ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಮ್ಮ ತಂದೆ ಬ್ರಾಹ್ಮಣರನ್ನು ಸೋಲಿಸಿದ್ದರು. ಇದೀಗ ತಾವು ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಸೋಲಿಸಿದೆ ಎಂದಿರುವ ವಿಡಿಯೋ ವೈರಲ್ ಆಗಿದೆ.

1990ರಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ್ದ ನಮ್ಮ ತಂದೆ ಸಿದ್ದು ನ್ಯಾಮಗೌಡ ಅವರು ದೇಶದಲ್ಲಿ ಪರಿಚಿತರಾಗಿದ್ದರು. ಹೆಗಡೆ ಬ್ರಾಹ್ಮಣ. ಮೊನ್ನೆ ನಡೆದ ಚುನಾವಣೆಯಲ್ಲಿ ನಾನು ಬ್ರಾಹ್ಮಣ (ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ) ಅಭ್ಯರ್ಥಿ ವಿರುದ್ಧ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ ಎಂದಿದ್ದಾರೆ. ಶಾಸಕ ಆನಂದ ನ್ಯಾಮಗೌಡ ಅವರ ಈ ಮಾತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಅದು ನಾನು ಮಾತನಾಡಿದ್ದಲ್ಲ ಎಂದು ಆನಂದ ಹೇಳಿದ್ದಾರೆ. ನನಗಿಂತ ಮೊದಲು ಬೇರೆಯವರು ಮಾತನಾಡಿದ್ದರು. ಅದು ತಪ್ಪು ಸಂದೇಶ ಹೋಗಬಾರದು ಅಂತ ನಾನು ಆ ಮಾತನ್ನು ಉಲ್ಲೇಖಿಸಿ ಮುಂದುವರಿದು ಮಾತನಾಡಿದ್ದೇನೆ. ನನಗೆ ಅವರನ್ನು ಸೋಲಿಸುವ ಗುರಿ ಇರಲಿಲ್ಲ. ಗೆಲ್ಲುವ ಗುರಿ ಇತ್ತು. ನಮ್ಮ ತಂದೆಯವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುರಿಸಿಕೊಂಡು ಹೋಗಲು ಗೆಲ್ಲಲೇಬೇಕಿತ್ತು ಎಂದು ಹೇಳಿದ್ದೇನೆ. ಆದರೆ, ಮೊದಲ ಮತ್ತು ಕೊನೆಯ ಭಾಗ ಕಟ್ ಮಾಡಿ ಹರಿಬಿಟ್ಟಿದ್ದಾರೆ. ನನಗೆ ವೈಯಕ್ತಿಕವಾಗಿ ಬ್ರಾಹ್ಮಣ ಸಮುದಾಯದ ಜತೆಗೆ ಉತ್ತಮ ಬಾಂಧವ್ಯ ಇದೆ. ಶ್ರೀಕಾಂತ ಕುಲಕರ್ಣಿ ಅವರು ಹಿರಿಯರು. ಜಮಖಂಡಿ ಅಭಿವೃದ್ಧಿಗೆ ಅವರ ಸಹಕಾರ, ಸಲಹೆ ಪಡೆಯುವೆ. ನಾನು ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ. ಯಾರೋ ಬೇಕೆಂದು ಹೀಗೆ ಮಾಡಿದ್ದಾರೆ ಎಂದು ‘ವಿಜಯವಾಣಿ’ಗೆ ನ್ಯಾಮಗೌಡ ತಿಳಿಸಿದ್ದಾರೆ.

ಒಟ್ಟಾರೆ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದು, ಇದರಿಂದ ಕಾಂಗ್ರೆಸ್ ಪಕ್ಷ ಮುಜುಗರ ಅನುಭವಿಸುವಂತಾಗಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವೀಣಾ ವಿರುದ್ಧ ಆಕ್ರೋಶವೇಕೆ ?: ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ತಮ್ಮ ಭಾಷಣದಲ್ಲಿ ಹಾಸ್ಯ ಚಟಾಕಿ ಹಾರಿಸಲು ಹೋಗಿ, ಶೆಟ್ರ(ಬಣಜಿಗ) ಸಮುದಾಯದ ಬಗ್ಗೆ ವ್ಯಂಗ್ಯಭರಿತ ಟೀಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಶೆಟ್ರು ಚನ್ನಮ್ಮನ ವಂಶಕ್ಕೆ ಕಿಡಿ ಇಟ್ಟವರು. ಇಲ್ಲಿ ನಾನು ಶೆಟ್ರು ಅಂದ್ರ ಎಲ್ಲರೂ ಸೇರಿ ಬಡೀತಾರೆ ಎಂದು ನಾನು ಶೆಟ್ರು ಅಲ್ಲ ಅಂತಿದ್ದಾರೆ ಎಂದು ವೇದಿಕೆಯಲ್ಲಿ ಇದ್ದ ಒಬ್ಬ ಮುಖಂಡರನ್ನುದ್ದೇಶಿಸಿ ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವೀಣಾ ಕಾಶಪ್ಪನವರ, ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ. ವಿಡಿಯೋ ಎಡಿಟ್ ಮಾಡಿ ಬಿಟ್ಟಿದ್ದಾರೆ. ಅದಾಗ್ಯೂ ಇದರಿಂದ ಯಾರ ಮನಸ್ಸಿಗಾದರೂ ನೋವು ಆಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ್ದಾರೆ.

ಬ್ರಾಹ್ಮಣ ಹೆಗಡೆ ಅವರನ್ನು ತಂದೆಯವರು ಸೋಲಿಸಿದರು, ನಾನು ಶ್ರೀಕಾಂತ ಕುಲಕರ್ಣಿ ಅವರನ್ನು ಸೋಲಿಸಿದೆ ಎಂದು ಜಾತಿ ಹಿಡಿದು ಮಾತನಾಡಿದ್ದು ಆನಂದ ನ್ಯಾಮಗೌಡರ ಬೌದ್ಧಿಕ ಮಟ್ಟಕ್ಕೆ ಸಾಕ್ಷಿಯಾಗಿದೆ. ಸುಶಿಕ್ಷಿತ ಮತದಾರರಿರುವ ಜಮಖಂಡಿ ಕ್ಷೇತ್ರದಲ್ಲಿ ಜಾತಿ ರಾಜಕಾರಣ ತಂದಿಟ್ಟಿದ್ದೆ ನ್ಯಾಮಗೌಡರ ಕುಟುಂಬ. ತಮ್ಮ ಸ್ವಾರ್ಥಕ್ಕಾಗಿ ಜಾತಿ ಬಳಕೆ ಮಾಡುತ್ತಾರೆ. ಹೆಗಡೆ ಅವರನ್ನು ಸೋಲಿಸಿದ್ದು ಆಗಿನ ಸಿಎಂ ಅಗಿದ್ದ ಬಂಗಾರಪ್ಪ ಕ್ಷೇತ್ರದಲ್ಲಿ ಹರಿಸಿದ ಹಣ ಹಾಗೂ ರಾಜೀವ ಗಾಂಧಿ ಅವರ ನಿಧನದ ಅನುಕಂಪ. ಈಗ ನನ್ನನ್ನು ಸೋಲಿಸಿದ್ದು ಹಣ, ಹೆಂಡದ ಜತೆಗೆ ಅಧಿಕಾರದ ದುರುಪಯೋಗ. | ಶ್ರೀಕಾಂತ ಕುಲಕರ್ಣಿ ಬಿಜೆಪಿ ಮುಖಂಡ