Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬಿಜೆಪಿ ಭದ್ರಕೋಟೆಯಲ್ಲಿ ಜಯ ಗಳಿಸಿದ ಸೌಮ್ಯಾ ರೆಡ್ಡಿ

Thursday, 14.06.2018, 3:03 AM       No Comments

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಗೆ ಜಿದ್ದಾಜಿದ್ದಿನ ಕಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಸೌಮ್ಯಾ ರೆಡ್ಡಿ 2,887 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಭದ್ರಕೋಟೆ ಛಿದ್ರವಾದಂತಾಗಿದೆ.

ಸಮ್ಮಿಶ್ರ ಸರ್ಕಾರ ರಚನೆ ನಂತರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಚುನಾವಣೆ ಇದಾಗಿದ್ದು, ಎರಡರಲ್ಲೂ ಕಾಂಗ್ರೆಸ್ ಜಯ ಗಳಿಸಿದಂತಾಗಿದೆ. ಈ ಹಿಂದೆ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ನ ಮುನಿರತ್ನ ಜಯ ಗಳಿಸಿದ್ದರು. ಇದೀಗ ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 79ಕ್ಕೆ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 15ಕ್ಕೆ ಏರಿಕೆಯಾಗಿದೆ.

ವಿಜಯೋತ್ಸವ: ಮೊದಲೆರಡು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿ ದ್ದಾರೆ ಎಂದು ತಿಳಿಯು ತ್ತಿದ್ದಂತೆ ಜಯನಗರ, ಬಿಟಿಎಂ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದರು. ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ತಮಟೆ ಸದ್ದಿಗೆ ಕುಣಿಯುತ್ತ ಸಂಭ್ರಮಿಸಿದರು.

ಹಿಂದೆ ಸರಿದವರಿಗೂ ಮತ ಹಾಕಿದರು: ಕಾಂಗ್ರೆಸ್​ಗೆ ಬೆಂಬಲ ನೀಡುವ ಸಲುವಾಗಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರನ್ನು ಕಣದಿಂದ ನಿವೃತ್ತಿಗೊಳಿಸಲಾಗಿತ್ತು. ಆದರೂ, ಮತದಾರರು ಅವರಿಗೆ 817 ಮತಗಳನ್ನು ನೀಡಿದ್ದಾರೆ. ಅದೇ ರೀತಿ ಮತದಾನದ ಹಿಂದಿನ ದಿನ ಕಣದಿಂದ ಹಿಂದೆ ಸರಿದಿದ್ದ ಎಂಇಪಿ ಪಕ್ಷದ ಸೈಯದ್ ಝುಬಿ ಪರವಾಗಿ 60 ಮತಗಳು ಚಲಾವಣೆಯಾಗಿವೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಪಕ್ಷೇತರರು: ಚುನಾವಣೆ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಆ ಮೂಲಕ ಠೇವಣಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಒಂದಿಬ್ಬರು ಪಕ್ಷೇತರ ಮತ್ತು ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಉಳಿದ 7 ಅಭ್ಯರ್ಥಿಗಳ ಮತ ಗಳಿಕೆ 100 ದಾಟಿಲ್ಲ.

ಹೆಚ್ಚಾದ ನೋಟಾ ಮತಗಳು: ಪಕ್ಷೇತರ ಅಭ್ಯರ್ಥಿಗಳಲ್ಲಿ ರವಿಕೃಷ್ಣಾ ರೆಡ್ಡಿ ಹೊರತುಪಡಿಸಿ ಉಳಿದವರಿಗಿಂತ ನೋಟಾಕ್ಕೆ ಹೆಚ್ಚಿನ ಮತ ಚಲಾವಣೆಯಾಗಿವೆ. ಒಟ್ಟು 848 ಮತದಾರರು ನೋಟಾಗೆ ಮತ ಚಲಾಯಿಸಿದ್ದಾರೆ.

ಅರ್ಧದಲ್ಲಿಯೇ ಹೊರ ನಡೆದ ಪ್ರಹ್ಲಾದ್: ಸೌಮ್ಯಾ ರೆಡ್ಡಿ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ 4 ಸುತ್ತುಗಳಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರನಡೆದರು. ಬಿಜೆಪಿ ಕಾರ್ಯಕರ್ತರೂ ಇವರನ್ನು ಹಿಂಬಾಲಿಸಿದರು.

ಮುನ್ನಡೆಯಲ್ಲಿ ಏರಿಳಿತ

ಮತ ಎಣಿಕೆ ಆರಂಭದಿಂದಲೂ ಸೌಮ್ಯಾ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದರು. ಒಂದು ಹಂತದಲ್ಲಿ 10 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೊನೆಯ ಮೂರು ಸುತ್ತಿನಲ್ಲಿ ಬಿಜೆಪಿಯ ಪ್ರಹ್ಲಾದ್​ಗೆ ಹೆಚ್ಚಿನ ಮತ ಸಿಕ್ಕಿದ್ದರಿಂದ ಗೆಲುವಿನ ಅಂತರ 3 ಸಾವಿರಕ್ಕಿಂತ ಕಡಿಮೆಯಾಯಿತು.

ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅಪ್ಪ-ಮಗಳು

ಈ ಹಿಂದೆ ಅವಿಭಜಿತ ಜಯನಗರ ವಿಧಾನಸಭಾ ಕ್ಷೇತ್ರವನ್ನು ರಾಮಲಿಂಗಾರೆಡ್ಡಿ ಪ್ರತಿನಿಧಿಸುತ್ತಿದ್ದರು. ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಕ್ಷೇತ್ರ ವಿಂಗಡಣೆ ನಂತರ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಸ್ಥಳಾಂತರ ಗೊಂಡರು. ಆಗಿನಿಂದ ಬಿಜೆಪಿಯ ವಿಜಯಕುಮಾರ್ ಗೆಲ್ಲುತ್ತಿದ್ದರು. ಇದೀಗ ಸೌಮ್ಯಾ ರೆಡ್ಡಿ ಗೆಲ್ಲುವ ಮೂಲಕ ಅಕ್ಕಪಕ್ಕದ ಕ್ಷೇತ್ರವನ್ನು ಅಪ್ಪ-ಮಗಳು ಪ್ರತಿನಿಧಿಸುವಂತಾಗಿದೆ.

ಹಿಂದೆ ಈ ಭಾಗದಲ್ಲಿ 4 ಬಾರಿ ಶಾಸಕನಾಗಿದ್ದೆ. ಈಗ ನನ್ನ ಮಗಳಿಗೆ ಪಕ್ಷ ಅವಕಾಶ ನೀಡಿತ್ತು. ಸೌಮ್ಯಾಳನ್ನು ಗೆಲ್ಲಿಸುವುದು ದೊಡ್ಡ ಸವಾಲಾಗಿತ್ತು. ಅದಕ್ಕೆ ಮಾಜಿ ಸಿಎಂ, ಪಕ್ಷದ ಅಧ್ಯಕ್ಷರು ಮುಖಂಡರು ನೆರವು ನೀಡಿದರು. ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿ ಮಾಡಿಸಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಕೂಡ ನೆರವಾದರು. ಅವರಿಗೆ, ಕ್ಷೇತ್ರದ ಮತದಾರರಿಗೆ, ಪಕ್ಷದ ಮುಖಂಡರಿಗೆ, ಕ್ಷೇತ್ರದ ಬಿಬಿಎಂಪಿ ಸದಸ್ಯರಿಗೆ ಧನ್ಯವಾದ ತಿಳಿಸುತ್ತೇನೆ.

| ರಾಮಲಿಂಗಾರೆಡ್ಡಿ ಶಾಸಕ

 

ಗೆಲ್ಲುವ ನಿರೀಕ್ಷೆಯಿತ್ತು. ಪಕ್ಷದ ಮುಖಂಡರು, ಜೆಡಿಎಸ್ ಕಾರ್ಯಕರ್ತರ ನೆರವಿನಿಂದ ಗೆಲುವು ಸಾಧಿಸಿದ್ದೇನೆ. ಜನರ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ.

| ಸೌಮ್ಯಾ ರೆಡ್ಡಿ ಗೆದ್ದ ಅಭ್ಯರ್ಥಿ

 

ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಕಳೆದ ಬಾರಿಗಿಂತ ಪಕ್ಷದ ಅಭ್ಯರ್ಥಿ 7 ಸಾವಿರ ಅಧಿಕ ಮತ ಗಳಿಸಿದ್ದಾರೆ. ಪಕ್ಷಬೆಂಬಲಿಸಿದ ಎಲ್ಲ ಮತದಾರರಿಗೆ ಧನ್ಯವಾದ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 

ಬಿಜೆಪಿ ಶಾಸಕರಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಇದು ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರ ಗೆಲುವು.

| ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ

 

ಅಬ್ಬರದ ಪ್ರಚಾರವಿಲ್ಲದ ಚುನಾವಣೆ

ಮೊದಲಿನಿಂದಲೂ ಜಯನಗರ ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯಲಿಲ್ಲ. ಅದರಲ್ಲೂ ಕಾಂಗ್ರೆಸ್​ನಲ್ಲಿ ರಾಮಲಿಂಗಾರೆಡ್ಡಿ ಹೊರತುಪಡಿಸಿದರೆ, ಬೇರೆ ಯಾವುದೇ ನಾಯಕರೂ ಪ್ರಚಾರದಲ್ಲಿ ತೊಡಗಲಿಲ್ಲ. ಆದರೂ,ಮಗಳನ್ನು ಗೆಲ್ಲಿಸಿಕೊಂಡು ಬರಲು ರಾಮಲಿಂಗಾರೆಡ್ಡಿ ಶಕ್ತರಾಗಿದ್ದಾರೆ. ಬಿಜೆಪಿ ಅಬ್ಬರದ ಪ್ರಚಾರ ನಡೆಸದಿದ್ದರೂ ಪ್ರಮುಖ ನಾಯಕರನ್ನು ಕ್ಷೇತ್ರದ ಪ್ರಚಾರಕ್ಕೆ ನೇಮಿಸಿತ್ತು. ಕೇಂದ್ರ ಸಚಿವ ಅನಂತಕುಮಾರ್ ಮತ್ತು ಶಾಸಕ ಆರ್. ಅಶೋಕ್ ಕ್ಷೇತ್ರದಲ್ಲಿ ಗೆಲುವಿಗಾಗಿ ತಂತ್ರ ಹೆಣೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿ ಹಲವರು ಪ್ರಚಾರ ನಡೆಸಿ ಪ್ರಹ್ಲಾದ್​ಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಕೋರಿದ್ದರು.

ಮಗಳನ್ನು ಗೆಲ್ಲಿಸಿದ ಅಪ್ಪ

ಸೌಮ್ಯಾ ರೆಡ್ಡಿ ಗೆಲುವಿಗೆ ಪ್ರಮುಖ ಕಾರಣ ರಾಮಲಿಂಗಾರೆಡ್ಡಿ ಪ್ರಯತ್ನ. 4 ಬಾರಿ ಸಚಿವ ರಾಗಿದ್ದರೂ ಯಾವುದೇ ರೀತಿಯ ಗುರುತರ ಆರೋಪ ಎದುರಿಸದ ರಾಜಕಾರಣಿ ಎನಿಸಿಕೊಂಡವರು ರಾಮಲಿಂಗಾರೆಡ್ಡಿ. ಈ ಹಿಂದೆ ಜಯನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದಾಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅದೇ ಈಗ ಮಗಳ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನಸಭೆಯಲ್ಲಿ ಅಪ್ಪ-ಮಗ ಒಟ್ಟಿಗೆ ಪ್ರವೇಶಿಸಿದ ಸಾಕಷ್ಟು ಉದಾಹರಣೆಗಳು ರಾಜ್ಯದಲ್ಲಿವೆ. ಅಪ್ಪ-ಮಗಳು ಒಟ್ಟಿಗೆ ಪ್ರವೇಶ ಮಾಡಿರುವುದು ಇದೇ ಮೊದಲಾಗಿದೆ.

ಬಂಡಾಯದ ಬೇಗುದಿ

ಬಿಬಿಎಂಪಿ ಸದಸ್ಯ ನಾಗರಾಜ್, ಮಾಜಿ ಸದಸ್ಯರಾದ ಎಸ್.ಕೆ. ನಟರಾಜ್, ಸಿ.ಕೆ. ರಾಮಮೂರ್ತಿ ಸೇರಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ವಿಜಯಕುಮಾರ್ ಸಹೋದರ ಪ್ರಹ್ಲಾದ್​ಗೆ ಟಿಕೆಟ್ ನೀಡಿದ್ದರಿಂದ ಮುನಿಸಿಕೊಂಡು ಪ್ರಚಾರದಲ್ಲಿ ತೊಡಗಿರಲಿಲ್ಲ. ಕೊನೆಯ ಹಂತದಲ್ಲಿ ನಟರಾಜ್, ರಾಮಮೂರ್ತಿ ಇನ್ನಿತರರು ಪ್ರಚಾರ ನಡೆಸಿದರಾದರೂ ನಾಗರಾಜ್ ಮಾತ್ರ ಬಹಿರಂಗವಾಗಿಯೇ ಸೌಮ್ಯಾ ರೆಡ್ಡಿ ಪರವಾಗಿ ಪ್ರಚಾರ ನಡೆಸಿದರು.

Leave a Reply

Your email address will not be published. Required fields are marked *

Back To Top