ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಯವರು ತ್ಯಜಿಸಿದ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎನ್ನುವ ಕುರಿತು ಚರ್ಚಿಸಲು ಆ.10 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆಗಸ್ಟ್ 10ರಂದು ಬೆಳಗ್ಗೆ 11 ಗಂಟೆಗೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
It has been decided to hold the next Congress Working Committee Meeting on saturday, 10th of August 11am at AICC.@INCIndia @AICCMedia
— K C Venugopal (@kcvenugopalmp) August 4, 2019
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ಬಳಿಕ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತ ರಾಹುಲ್ ಗಾಂಧಿ ಜು.3 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ಪ್ರಮುಖರು ರಾಜೀನಾಮೆ ಅಂಗೀಕರಿಸಲು ಹಿಂದೇಟು ಹಾಕಿದ್ದರು. ಆದರೆ ತಾವು ಮತ್ತೆ ಅಧ್ಯಕ್ಷ ಸ್ಥಾನಕ್ಕೇರುವ ಪ್ರಮೇಯವೇ ಇಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದರು. ಹೀಗಿದ್ದರೂ ಇಂದಿಗೂ ರಾಹುಲ್ ಗಾಂಧಿಯವರ ರಾಜೀನಾಮೆ ಅಂಗೀಕಾರವಾಗಿಲ್ಲ.
ಇದೀಗ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಭಾಗವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಮುಂದಿನ ಅಧ್ಯಕ್ಷರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.
ಗೊಂದಲದ ಸ್ಥಿತಿ
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ಎಂ.ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಆಂಟನಿ, ಸುಶೀಲ್ ಕುಮಾರ್ ಶಿಂಧೆ, ಅಶೋಕ್ ಗೆಹ್ಲೋಟ್, ಗುಲಾಂನಬಿ ಆಜಾದ್, ಶಶಿ ತರೂರ್ ಸೇರಿ ಅನೇಕರ ಹೆಸರು ಕೇಳಿಬಂದಿತ್ತು. ಪ್ರಿಯಾಂಕಾ ಗಾಂಧಿ ವಾದ್ರಾ ಅಥವಾ ಸೋನಿಯಾ ಗಾಂಧಿಯವರೇ ಪಕ್ಷದ ಹೊಣೆಗಾರಿಕೆ ವಹಿಸಿಕೊಳ್ಳಲಿ ಎಂಬ ಒತ್ತಾಯಗಳು ಕೇಳಿಬಂದವು. ಕಡೆಗೆ ಹಂಗಾಮಿ ಅಧ್ಯಕ್ಷರನ್ನು ನೇಮಿಸಿ, ಪ್ರಮುಖ ನಿರ್ಧಾರ ಕೈಗೊಳ್ಳಲು ಹಿರಿಯ ನಾಯಕರ ಸಮಿತಿ ರಚಿಸುವ ಪ್ರಸ್ತಾಪವೂ ಕಾಂಗ್ರೆಸ್ ವರಿಷ್ಠರ ಮುಂದೆ ಇತ್ತು. ಆದರೆ, ಇದ್ಯಾವುದೂ ಸಾಕಾರವಾಗಲಿಲ್ಲ. ಹೀಗಾಗಿ ಗೊಂದಲ ಸ್ಥಿತಿ ಮುಂದುವರಿದಿದೆ. (ಏಜೆನ್ಸೀಸ್)