ತೀರ್ಥಹಳ್ಳಿ: ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರಾಜ್ಯದ ಜನರನ್ನು ವಂಚಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ರೂ. ಆಮಿಷದ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ವಿಲವಾಗಿದ್ದು, ರಾಜ್ಯದಲ್ಲಿ ಎರಡಂಕಿ ಸ್ಥಾನ ಸಹ ಗಳಿಸಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಟೀಕಿಸಿದರು.
ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಮಂಡಲ ಬಿಜೆಪಿಯಿಂದ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಮತದಾರರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ಸಿಗರು ಸೋಲಿನ ಹತಾಶೆಯಲ್ಲಿ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೂ ವೇತನ ನೀಡಲಾಗದ ಜನವಿರೋಧಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
ದೇಶದ ಅಗತ್ಯತೆಗೆ ಅನುಗುಣವಾಗಿ ಕಾನೂನು ರಚಿಸುವುದು ಸಂಸದರ ಹೊಣೆಗಾರಿಕೆಯಾಗಿದೆ. ವಾರ್ಷಿಕವಾಗಿ ನೀಡುವ 5 ಕೋಟಿ ರೂ. ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿಯಂತಹ ಪ್ರಮುಖ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಉಳಿದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಅವಲಂಬಿಸುವುದು ಅನಿವಾರ್ಯ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೆರಿಗೆ ಹಣದಲ್ಲಿ ಕಾಂಗ್ರೆಸ್ ನಡೆಸಿದ ಚೀಪ್ ರಾಜಕಾರಣದಿಂದ ಜನತೆಯ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಗ್ಯಾರಂಟಿ ಯೋಜನೆಗೆ ಸಾವಿರಾರು ಕೋಟಿ ರೂ. ವ್ಯಯಿಸಿ ರಾಜ್ಯದ ಬೊಕ್ಕಸ ಬರಿದಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿ ಕ್ಷೇತ್ರದಲ್ಲಿ ನಮ್ಮದೇನೂ ನಡೆಯುವುದಿಲ್ಲ ಎನ್ನುವುದು ಆ ಪಕ್ಷದ ಮುಖಂಡರಿಗೆ ಮನವರಿಕೆಯಾಗಿದೆ. ನಮ್ಮ ಪಕ್ಷದ ಅರ್ಪಣಾ ಮನೋಭಾವದ ಕಾರ್ಯಕರ್ತರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಘಟನೆ ಮತ್ತು ಸಿದ್ಧಾಂತದ ಆಧಾರದಲ್ಲಿ ಹಿರಿಯರ ಆಶಯವನ್ನು ಪೂರ್ಣಗೊಳಿಸಿದ ತೃಪ್ತಿಯಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮಾತನಾಡಿ, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕಿದೆ ಎಂದರು.
ಬೈಕ್ ರ‌್ಯಾಲಿ ಮುಖಾಂತರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸ್ವಾಗತಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್, ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ರಾಘವೇಂದ್ರ ನಾಯಕ್, ಬಿ.ಸ್ವಾಮಿರಾವ್, ಮಹೇಶ್ ಹುಲ್ಕುಳಿ, ರತ್ನಾಕರ ಶೆಣೈ, ಬೇಗುವಳ್ಳಿ ಸತೀಶ್, ಜೆಡಿಎಸ್ ಗುರುದತ್, ಸಾಲೇಕೊಪ್ಪ ರಾಮಚಂದ್ರ, ಶೈಲಾ ನಾಗರಾಜ್, ಯಶೋಧಾ ಮಂಜುನಾಥ್, ರಕ್ಷಿತ್ ಮೇಗರವಳ್ಳಿ ಇದ್ದರು.