ಬೆಂಗಳೂರು: ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಪಾಕಿಸ್ತಾನಕ್ಕೆ ಸಹಾಯವಾಗುವಂತಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಉಗ್ರರ ದುಷ್ಕೃತ್ಯಕ್ಕೆ ತಕ್ಕ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆಗಲೂ ಸಾಕ್ಷ್ಯ ಕೇಳಿ ನಮ್ಮ ಸೈನಿಕರಿಗೆ ಕಾಂಗ್ರೆಸ್ ನಾಯಕರು ಅಪಮಾನಿಸಿದ್ದರು.
ಆಪರೇಷನ್ ಸಿಂಧೂರ ಬಳಿಕ ಕಾಂಗ್ರೆಸ್ ನಾಯಕರು ಮಾತುಗಳ ಧಾಟಿ ಗಮನಿಸಿದರೆ, ಅವರು ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಯುದ್ಧವೆಂದು ಭಾವಿಸಿದಂತಿದೆ. ರಾಜಕೀಯ ಪಕ್ಷವನ್ನು ಗುರಿ ಮಾಡಿ ಭಯೋತ್ಪಾದಕರು ದಾಳಿ ಮಾಡಿಲ್ಲ. ಭಾರತದ ಸಾರ್ವಭೌಮತೆ, ಪ್ರಜಾಪ್ರಭುತ್ವ ವ್ಯವಸ್ಥೆ, ಸರ್ವಧರ್ಮ ಸಮಭಾವ, ಸಹಬಾಳ್ವೆ ಪ್ರಶ್ನಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ.
ಆ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡಿದ್ದಾರೆ. ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ತಕ್ಕಶಾಸ್ತಿ ಮಾಡಿದೆ. ಆದರೆ ಕಾಂಗ್ರೆಸ್‌ನವರ ಪ್ರಶ್ನೆಗಳು, ಆಕ್ಷೇಪ, ಟೀಕೆಗಳಿಗೆ ಏನನ್ನು ಬೇಕು ಅರ್ಥವಾಗದು ಎಂದು ಕುಟುಕಿದರು.
ದೇಶದ ಇತಿಹಾಸದಲ್ಲಿ ನಡೆದ ಯುದ್ಧಗಳು, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ನಡೆದ ಉಗ್ರರ ಉಪಟಳ, ಕೈಗೊಂಡ ಕ್ರಮಗಳೆಲ್ಲವೂ ಜನರಿಗೆ ಗೊತ್ತಿದೆ. ಜತೆಗೆ ಕಾಂಗ್ರೆಸ್‌ನ ದ್ವಂದ್ವ, ಮೃದು ನೀತಿಗಳು ಬಹಿರಂಗವಾಗಿವೆ. ದೇಶದ ಹಿತಾಸಕ್ತಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಸಿ.ಟಿ.ರವಿ ಆಗ್ರಹಿಸಿದರು.