ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ತುಮಕೂರು: ಕ್ಷೇತ್ರ ಕೈತಪ್ಪಿದ್ದಕ್ಕೆ ಬಂಡೆದ್ದು ಮೈತ್ರಿ ಸರ್ಕಾರದ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕೊನೆಗೂ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ನಾಮಪತ್ರ ಪಡೆಯಲು ಇಂದು ಕೊನೆಯ ದಿನವಾದ್ದರಿಂದ ಡಿಸಿಎಂ ಪರಮೇಶ್ವರ್​ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಇಂದು ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿ ನಾಮಪತ್ರ ವಾಪಸು ಪಡೆಯುವಂತೆ ಮನವೊಲಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು ಬೆಂಬಲಿಗರ ಸಭೆಯ ಬಳಿಕ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದ್ದರು. ಕೊನೆಗೂ ತಮ್ಮ ನಿಲುವನ್ನು ಬದಲಿಸಿರುವ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ಎದುರಾಗಿದ್ದ ತೊಡಕೊಂದು ನಿವಾರಣೆ ಆದಂತಿದೆ.

ಕೆ.ಎನ್​.ರಾಜಣ್ಣರಿಂದಲೂ ವಾಪಸ್​
ಮುದ್ದಹನುಮೇಗೌಡರ ಆಪ್ತರಾಗಿರುವ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಅವರು ಕೂಡ ತಮ್ಮ ನಾಯಕನಿಗೆ ಟಿಕೆಟ್​ ತಪ್ಪಿದ್ದಕ್ಕೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಅವರನ್ನೂ ಕೂಡ ಮನವೊಲಿಸುವಲ್ಲಿ ಕಾಂಗ್ರೆಸ್​ ನಾಯಕರು ಯಶಸ್ವಿಯಾಗಿದ್ದ, ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೆ.ಎನ್​.ರಾಜಣ್ಣ, ಮುದ್ದಹನುಮೇಗೌಡರು ಬಂದು ನಾಮಪತ್ರ ಹಿಂಪಡೆಯುತ್ತಿದ್ದರು. ಆದರೆ, ಎಲೆಕ್ಷನ್ ಏಜೆಂಟ್​ ರಾಯಸಂದ್ರ ರವಿಕುಮಾರ್ ಅವರರಿಂದ ವಾಪಸು ಪಡೆದುಕೊಂಡಿದ್ದಾರೆ. ನಾನೂ ಕೂಡ ಹಿಂಪಡೆದಿದ್ದೇನೆ. ಮುದ್ದಹನುಮೇಗೌಡರನ್ನು ರಾಹುಲ್ ಗಾಂಧಿ ಮನವೊಲಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಯಾವುದೇ ಬೇಡಿಕೆ ಇಲ್ಲ ಎಂದು ತಿಳಿಸಿದ್ದಾರೆ.

ಮುದ್ದಹನುಮೇಗೌಡ ಮುಂಚೂಣಿಯಲ್ಲಿ ಚುನಾವಣೆ ಎದುರಿಸಬೇಕು
ರಾಯಸಂದ್ರ ರವಿಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರು ಮಾತನಾಡಿದ್ದಾರೆ. ಹೈಕಮಾಂಡ್‌ ನಿರ್ದೇಶನದಂತೆ ಮುದ್ದಹನುಮೇಗೌಡ ಮುಂಚೂಣಿಯಲ್ಲಿ ಚುನಾವಣೆ ಎದುರಿಸಬೇಕು. ಒಂದು ವೇಳೆ ಹಿಂದೆ ಸರಿದರೆ ಅದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಹೇಳಿ ಒತ್ತಡ ಹೇರಿದರು. ಹೀಗಾಗಿ ನಾಮಪತ್ರ ವಾಪಸು ಪಡೆದಿದ್ದಾರೆ ಎಂದು ತಿಳಿಸಿದರು.

ಮುದ್ದಹನುಮೇಗೌಡರು ಕಾಂಗ್ರೆಸ್​ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪ್ರತ್ಯೇಕವಾಗಿ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಬಿ ಫಾರಂ ನೀಡದ ಕಾರಣ ಕಾಂಗ್ರೆಸ್​ ನಾಮಪತ್ರ ತಿರಸ್ಕೃತಗೊಂಡು, ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಸ್ವೀಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ಮಾಡಿದ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *