ನಾಯಕತ್ವಕ್ಕೆ ಕೈಯೊಳಗೆ ತೊಳಲಾಟ

ಬೆಂಗಳೂರು: ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಖವಾಣಿಯಲ್ಲಿ ಎದುರಿಸುವುದು ಸ್ಪಷ್ಟ. ಆದರೆ ರಾಜ್ಯದಲ್ಲಿ ಯಾರ ಮುಂದಾಳತ್ವ ಎಂಬ ವಿಚಾರದಲ್ಲಿ ಆಂತರಿಕ ತೊಳಲಾಟ ಶುರುವಾಗಿದೆ. ಜನವರಿ ಮೊದಲ ವಾರದಿಂದಲೇ ಪಕ್ಷ ಪೂರ್ವಭಾವಿ ಸಿದ್ಧತೆ ಆರಂಭಿಸುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರದ ಪ್ರಚಾರ, ಅಭ್ಯರ್ಥಿ ಆಯ್ಕೆ ಇತ್ಯಾದಿ ಯಾರು ನೇತೃತ್ವ ತೆಗೆದುಕೊಳ್ಳಬೇಕೆಂಬ ಸ್ಪಷ್ಟತೆ ಮೂಡಿಲ್ಲ.

ಕಳೆದ ಬಾರಿಯಂತೆ ಸಿದ್ದರಾಮಯ್ಯರದ್ದೆ ಪೂರ್ಣ ಜವಾಬ್ದಾರಿಯೋ ಅಥವಾ ಸಾಮೂಹಿಕ ನಾಯಕತ್ವವೋ ಎಂಬ ಚರ್ಚೆ ಕೈ ಚಾವಡಿಯಲ್ಲಿ ಶುರುವಾಗಿದೆ. ಈ ಬಗ್ಗೆ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಮಾತಿಗೆಳೆದಾಗ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತವೆ. ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಯಿತು. ಆ ಫಲಿತಾಂಶವೂ ಜಾಹೀರಾಯಿತು. ಲೋಕಸಭೆಗೂ ನನ್ನದೇ ನೇತೃತ್ವ ಎಂಬ ನಡವಳಿಕೆಯನ್ನು ಸಿದ್ದರಾಮಯ್ಯ ಪ್ರದರ್ಶಿಸುತ್ತಲೇ ಬಂದಿದ್ದಾರೆ. ಇದು ಇತರ ಕೈ ನಾಯಕರಿಗೆ ಸಹ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮತ್ತು ಇತರ ನಾಯಕರ ಪರೋಕ್ಷ ಚುಚ್ಚು ಹೇಳಿಕೆಗಳು ಶೀತಲ ಸಮರದ ಮುನ್ಸೂಚನೆ ಎಂದು ಪಕ್ಷದ ನಾಯಕರೇ ವಿಶ್ಲೇಷಿಸುತ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಲೋಕಸಭಾ ಚುನಾವಣೆ ನಡೆಯಬೇಕೆಂಬರ್ಥ ಬರುವ ರೀತಿ ಸಿದ್ದರಾಮಯ್ಯ ಹೊರತಾದ ಇತರ ನಾಯಕರಲ್ಲಿ ಅಭಿಪ್ರಾಯವಿದೆ. ಮತ್ತೆ ಅವರದೆ ಮುಂದಾಳತ್ವದಲ್ಲಿ ಹೋದರೆ ಪಕ್ಷಕ್ಕೆ ನಿರೀಕ್ಷಿತ ಯಶ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ವಿಶೇಷವಾಗಿ ಮಾಜಿ ಸಿಎಂ ವಿರುದ್ಧದ ಹೇಳಿಕೆ ನೀಡಲು ಯಾವುದೇ ನಾಯಕರು ಸಿದ್ಧರಿಲ್ಲ. ಏಕೆಂದರೆ ರಾಹುಲ್ ಹಾಗೂ ಸಿದ್ದರಾಮಯ್ಯ ಬಾಂಧವ್ಯ. ಸಾಮೂಹಿಕ ನಾಯತಕ್ವ ಎಂಬ ವಿಚಾರ ಬಂದಾಗ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಮುನಿಯಪ್ಪ ಸೇರಿ ಹಲವು ನಾಯಕರ ಹೆಸರು ಮುನ್ನೆಲೆಗೆ ಬರುತ್ತದೆ. ಇದು ಸಿದ್ದರಾಮಯ್ಯ ಪಾಳಯಕ್ಕೆ ಸಹ್ಯವಾಗದ ವಿಚಾರ.

ಮುಖ್ಯಮಂತ್ರಿಯಾಗಿದ್ದುಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಸೋತರೂ ಶಾಸಕಾಂಗ ಪಕ್ಷದ ನಾಯಕನಾಗಿ ಅವಕಾಶ ಪಡೆದು, ಸಮನ್ವಯ ಸಮಿತಿಯಲ್ಲೂ ಸ್ಥಾನ ಪಡೆದ ಸಿದ್ದರಾಮಯ್ಯ, ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಿ ಮುಂದಿನ ಸಿಎಂ ಆಗಬಹುದೆಂಬ ಲೆಕ್ಕಾಚಾರ ಹಾಕುತ್ತಿರುವುದು ಉಳಿದ ನಾಯಕರಿಗೆ ಪಥ್ಯವಾಗುತ್ತಿಲ್ಲ. ಇದು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಏಕೆ ಬೇಡ?

ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರಲು ಸಾಧ್ಯವಾಗದೆ ಜೆಡಿಎಸ್ ಮುಂದೆ ಮಂಡಿಯೂರಿದ್ದಾರೆ. ಪ್ರತ್ಯೇಕ ಧರ್ಮ ರಚನೆ ವಿಚಾರವಾಗಿ ಕೈಗೊಂಡ ಏಕಪಕ್ಷೀಯ ನಿರ್ಧಾರ ಪಕ್ಷಕ್ಕೆ ಪೆಟ್ಟುಕೊಟ್ಟಿದೆ. ಮತ್ತೆ ಅವರನ್ನೇ ಮುಂದಿಟ್ಟುಕೊಂಡು ಹೋದರೆ ಅಹಿಂದ ಹೊರತು ಇತರ ಮತಗಳು ಕೈ ಹಿಡಿಯುವುದಿಲ್ಲ ಎಂಬ ವಾದ ಪಕ್ಷದಲ್ಲಿದೆ. 2013ರ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಸಾಮೂಹಿಕ ನಾಯಕತ್ವದಲ್ಲಿ ಒಬ್ಬರಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಕಾರಣ ಹೆಚ್ಚು ಪ್ರಚಾರ ಪಡೆದುಕೊಂಡರು. ಪರಮೇಶ್ವರ್ ಕೊರಟಗೆರೆಯಲ್ಲಿ ಸೋತ ಕಾರಣ ಅಂದಿನ ಮಟ್ಟಿಗೆ ಹಿನ್ನಡೆ ಅನುಭವಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವಕ್ಕೆ ಒತ್ತುಕೊಡದ ಪರಿಣಾಮ ಮುಂಚೂಣಿ ನಾಯಕರು ಅವರ ಕ್ಷೇತ್ರಕ್ಕೆ ಸೀಮಿತಗೊಂಡಿದ್ದೆ ಹಿನ್ನಡೆಗೆ ಕಾರಣ. ಈಗಲೂ ಅಂಥದ್ದೇ ತಪ್ಪಾಗಬಾರದು ಎಂದು ಪರಿಷತ್ ಸದಸ್ಯರೊಬ್ಬರು ವಿಜಯವಾಣಿಗೆ ತಿಳಿಸಿದರು.