ಮನೋಹರ್‌ ಪರಿಕ್ಕರ್‌ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ನಿಲ್ಲಿಸಲಿ: ಗೋವಾ ಬಿಜೆಪಿ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ನಿರ್ಮಾಣ ಹಂತದ ಎರಡು ಬ್ರಿಡ್ಜ್‌ಗಳ ಕಾಮಗಾರಿ ವೀಕ್ಷಿಸಿದ ದಿನದ ಬಳಿಕ ಗೋವಾ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ಪರಿಕ್ಕರ್‌ ಅವರ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದೆ.

ಆಡಳಿತದ ಪುನರಾರಂಭಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸ್‌ ರಾಜ್ಯಾದ್ಯಂತ ಜನ ಆಕ್ರೋಶ್‌ ರ‍್ಯಾಲಿಯನ್ನು ನಡೆಸುತ್ತಿದ್ದು, ಪರಿಕ್ಕರ್‌ ಅವರ ಆರೋಗ್ಯ ಸಮಸ್ಯೆಯು ಆಡಳಿತದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.

ಕಳೆದ ಎರಡು ತಿಂಗಳಿನಿಂದಲೂ ಪರಿಕ್ಕರ್‌ ಅವರ ಆರೋಗ್ಯ ವಿಚಾರವನ್ನಿಟ್ಟುಕೊಂಡು ಹಲವಾರು ಪ್ರತಿಭಟನೆಗಳನ್ನು ಕೈಗೊಂಡಿರುವ ಕಾಂಗ್ರೆಸ್‌ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಆದರೆ ಅವರಿಗೆ ತಕ್ಕ ಪ್ರತಿಕ್ರಿಯೆ ಸಿಗುತ್ತಿಲ್ಲ. ಏಕೆಂದರೆ ಗೋವಾದ ಜನರು ಪರಿಕ್ಕರ್‌ ಅವರಿಗೆ ಗೌರವ ನೀಡುತ್ತಾರೆ. ಪರಿಕ್ಕರ್‌ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಎಲ್ಲರೂ ತಿಳಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ತಾನಾವಾಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರಿಕ್ಕರ್‌ ಆರೋಗ್ಯದ ಬಗ್ಗೆ ಕಾಂಗ್ರೆಸ್ ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂಬುದನ್ನು ಜನರು ಈಗ ಅರಿತುಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯನ್ನಿಟ್ಟುಕೊಂಡು ಕಾಂಗ್ರೆಸ್‌ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ಫೆಬ್ರವರಿಯಿಂದಲೂ ಪ್ಯಾಂಕ್ರಿಯಾಟಿಕ್​​ ಕಾಯಿಲೆಯಿಂದ ಬಳಲುತ್ತಿದ್ದ ಪರಿಕ್ಕರ್ ಅವರು ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿ ವಾಪಸಾಗಿದ್ದರು. ಅಂದಿನಿಂದಲೂ ವಿಪಕ್ಷ ಕಾಂಗ್ರೆಸ್‌ ಅನಾರೋಗ್ಯದ ನಿಮಿತ್ತ ಪರಿಕ್ಕರ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದೆ. (ಏಜೆನ್ಸೀಸ್)

ಮೂಗಿಗೆ ನಳಿಕೆ ಹಾಕಿದ ಸ್ಥಿತಿಯಲ್ಲೇ ಸೇತುವೆ ಕಾಮಗಾರಿ ವೀಕ್ಷಿಸಿದ ಗೋವಾ ಮುಖ್ಯಮಂತ್ರಿ