ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಒಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಈಗ ಸತ್ವ ಪರೀಕ್ಷೆ ಎದುರಾಗಿದೆ. 1983ರ ಬಳಿಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಏಳುಬೀಳಿನ ಹಾದಿಯಲ್ಲಿ ಸಾಗಿತ್ತು. ಆದರೆ ಈ ಬಾರಿಯ ಎರಡು ಸೋಲುಗಳು ಕರಾವಳಿಯಲ್ಲಿ ಕಾಂಗ್ರೆಸ್‌ನ ಅಸ್ತಿತ್ವವನ್ನೇ ಅಲ್ಲಾಡಿಸಿವೆ.

15 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಇಂತಹ ಆಘಾತ ಎದುರಿಸಿತ್ತು. 2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆದಿತ್ತು. ಆಗ ಮಂಗಳೂರು ಮತ್ತು ಉಡುಪಿ ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ಉಭಯ ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ ಆಗ ಗೆದ್ದದ್ದು ಕೇವಲ ಮೂರು ಕ್ಷೇತ್ರ. ಈಗ ಮೋದಿ ಅಲೆಯಿಂದಾಗಿ ಮತ್ತೆ ಕಾಂಗ್ರೆಸ್ ಸೋಲಿನ ದಾಳಿಗೆ ಸಿಲುಕಿದೆ. ಕಾಂಗ್ರೆಸ್ ಅಸ್ತಿತ್ವ ಇರುವುದು ಮಂಗಳೂರು ಕ್ಷೇತ್ರದಲ್ಲಿ ಮಾತ್ರ.

ಏನು ಕಾರಣ?: ಹಿರಿಯ ನಾಯಕರ ಬಣ ರಾಜಕೀಯ ಕಾಂಗ್ರೆಸ್‌ನ ಹಿನ್ನಡೆಗೆ ಒಂದು ಕಾರಣವಾಗಿದ್ದರೆ, ತುಷ್ಟೀಕರಣದ ರಾಜಕೀಯ ಕಾಂಗ್ರೆಸ್‌ಗೆ ಮುಳುವಾಗಿದೆ. ಕೋಮು ಗಲಭೆ, ಹಿಂದು ಯುವಕರ ಹತ್ಯೆ ಪ್ರಕರಣಗಳು, ಕೆಲವು ನಾಯಕರ ಅಸಭ್ಯ ಹೇಳಿಕೆಗಳು, ಹಿಂದು ವಿರೋಧಿ ಪಕ್ಷ ಎನ್ನುವ ಹಣೆಪಟ್ಟಿ ಎಲ್ಲವೂ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಮತ ಬ್ಯಾಂಕ್ ಗಟ್ಟಿ ಮಾಡಲು ಪ್ರಯತ್ನ ನಡೆಸಿದ್ದರೆ, ಅತ್ತ ಬಿಜೆಪಿ ಹಿಂದು ಮತಗಳನ್ನು ಕ್ರೋಡೀಕರಿಸಲು ಯಶಸ್ವಿಯಾಗಿದೆ.

ನಾಯಕರು ತೆರೆಮರೆಗೆ: ಕರಾವಳಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಜನಾರ್ದನ ಪೂಜಾರಿ ಮತ್ತು ಆಸ್ಕರ್ ಫರ್ನಾಂಡಿಸ್ ಸತತ ಸೋಲು ಹಾಗೂ ವಯೋ ಸಹಜ ಅನಾರೋಗ್ಯದಿಂದ ತೆರೆಮರೆಗೆ ಸರಿದಿದ್ದಾರೆ. ಕರಾವಳಿ ತೊರೆದು ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ವೀರಪ್ಪ ಮೊಯ್ಲಿ ಕೂಡ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಪ್ರಬಲ ನಾಯಕರಾಗಿದ್ದ ಬಿ.ರಮಾನಾಥ ರೈ ಮತ್ತು ವಿನಯಕುಮಾರ್ ಸೊರಕೆ ವಿಧಾನಸಭೆ ಚುನಾವಣೆಯಲ್ಲಿ ಆಘಾತಕಾರಿ ಸೋಲುಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇವರಿಬ್ಬರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಪಕ್ಷ ಅವಕಾಶ ನೀಡಿಲ್ಲ.

ನಿರೀಕ್ಷಿತ ಸೋಲು?: ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಕೆಪಿಸಿಸಿಗೆ ಮೊದಲೇ ಸುಳಿವು ದೊರೆತಿತ್ತು ಎನ್ನುವ ಮಾಹಿತಿ ಇದೆ. ಇದೇ ಕಾರಣಕ್ಕಾಗಿ 2012ರ ಉಪ ಚುನಾವಣೆಯಲ್ಲಿ ಗೆದ್ದಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವುದಾಗಿ ಪ್ರಕಟಿಸಲಾಗಿತ್ತು. ಆಗ 2 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ಗೆ ಸೋಲು, 1 ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸೋಲಾಗುತ್ತದೆ ಎನ್ನುವ ಲೆಕ್ಕಾಚಾರ ಮಾಡಲಾಗಿತ್ತು. ಅಂತಿಮವಾಗಿ ಜೆಡಿಎಸ್ ಚಿಹ್ನೆಯಲ್ಲಿ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿದ್ದರು. ರಾಜ್ಯದ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕರಾವಳಿಯ ಪ್ರಚಾರ ನಡೆಸುವುದನ್ನು ಕೂಡ ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಯುವ ಸಮುದಾಯದ ಮತಗಳನ್ನು ಸೆಳೆಯುವ ಸಲುವಾಗಿ ಯುವ ನಾಯಕ ಮಿಥುನ್ ರೈ ಅವರಿಗೆ ಪಕ್ಷ ಅವಕಾಶ ಕಲ್ಪಿಸಿತ್ತು. ಆದರೆ ನಿರೀಕ್ಷಿತ ಮತಗಳನ್ನು ಪಡೆಯಲು ನಾವು ಯಶಸ್ವಿಯಾಗಿಲ್ಲ. ಬಿಜೆಪಿ ಸಂಸದರ ವೈಫಲ್ಯವನ್ನು ನಾವು ಜನತೆಯ ಮುಂದಿಟ್ಟರೂ ಪ್ರಯೋಜನವಾಗಿಲ್ಲ. ಮೋದಿ ಕಾರಣದಿಂದ ದೇಶದಲ್ಲಿ ಮತಗಳ ಧ್ರುವೀಕರಣವಾಗಿದೆ. ಕರಾವಳಿಯಲ್ಲಿ ಮಾತ್ರವಲ್ಲ, ರಾಜ್ಯದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಸೋಲಿನ ಬಗ್ಗೆ ಪರಾಮರ್ಶೆ ನಡೆಸಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುವ ಕಾರ್ಯ ನಡೆಯಬೇಕಾಗಿದೆ.
-ಐವನ್ ಡಿಸೋಜ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ

Leave a Reply

Your email address will not be published. Required fields are marked *