ದೆಹಲಿಯಲ್ಲಿ ಆಪ್​ನೊಂದಿಗೆ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್​

ನವದೆಹಲಿ: ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್​ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರೊಂದಿಗೆ ಆಪ್​ ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷ ಆಪ್​ನೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ಒಮ್ಮತದ ನಿರ್ಧಾರಕ್ಕೆ ಬಂದಿದೆ ಎಂದು ಶೀಲಾ ದೀಕ್ಷಿತ್​ ತಿಳಿಸಿದ್ದಾರೆ.

ಕೇಜ್ರಿವಾಲ್​ ಕಿಡಿ

ಶೀಲಾ ದೀಕ್ಷಿತ್​ ಅವರು ಹೇಳಿಕೆ ನೀಡುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿ ಟ್ವೀಟ್​ ಮಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಜೋಡಿಯನ್ನು ಸೋಲಿಸಲು ಇಡೀ ದೇಶ ಸಿದ್ಧವಾಗಿದೆ, ಆದರೆ ಕಾಂಗ್ರೆಸ್​ ಬಿಜೆಪಿ ವಿರೋಧಿ ಮತಗಳನ್ನು ಒಡೆಯುವ ಮೂಲಕ ಬಿಜೆಪಿಗೆ ಸಹಾಯ ಮಾಡುತ್ತಿದೆ. ಬಿಜೆಪಿಯೊಂದಿಗೆ ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಕಾಂಗ್ರೆಸ್​-ಬಿಜೆಪಿ ಮೈತ್ರಿಕೂಟದ ವಿರುದ್ಧ ಹೋರಾಡಲು ದೆಹಲಿ ಸಿದ್ಧವಾಗಬೇಕಿದೆ. ಜನರು ಈ ಅಪವಿತ್ರ ಮೈತ್ರಿಯನ್ನು ಸೋಲಿಸಬೇಕಿದೆ’ ಎಂದು ಕೇಜ್ರಿವಾಲ್​ ಕಾಂಗ್ರೆಸ್​ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)