ಬೆಂಗಳೂರು: ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಫೆ.17ರಂದು ರಾಜ್ಯಪಾಲರ ಭಾಷಣಕ್ಕೆ ಯಾವುದೇ ಶಾಸಕರಿಂದ ಅಡ್ಡಿಯಾಗಬಾರದೆಂದು ವಿಧಾನಪರಿಷತ್ನಿಂದ ಹೊರಟ ಪ್ರಕಟಣೆಗೆ ಪ್ರತಿಪಕ್ಷ ಕಾಂಗ್ರೆಸ್ ಹರಿಹಾಯ್ದಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಟೀಕಾಪ್ರಹಾರ ನಡೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಜಂಟಿ ಸದನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಮಾತನಾಡಿದರೆ ಅಮಾನತು ಮಾಡುವುದಾಗಿ ಹೇಳುವುದು ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.
ವಿಧಾನಸಭೆ ಮತ್ತು ಪರಿಷತ್ ನಿಯಮಾವಳಿಗಳಂತೆ ಸದನ ನಡೆಯಬೇಕು. ನಮ್ಮ ಹಕ್ಕು ಮೊಟಕುಗೊಳಿಸಲು ಬಿಡಲ್ಲ ಎಂದಿದ್ದಾರೆ. ಸ್ಪೀಕರ್ ಸಂವಿಧಾನತ್ಮಾಕ ಚೌಕಟ್ಟಿನಲ್ಲಿ ನಡೆದುಕೊಳ್ಳಲಿ. ದೇಶದಲ್ಲಿ ಅಘೊಷಿತ ತುರ್ತಸ್ಥಿತಿ ಪರಿಸ್ಥಿತಿ ಇದೆ. ಇದೊಂದು ಹಿಟ್ಲರ್ ಧೋರಣೆ ಎಂದು ಟೀಕಿಸಿದ್ದಾರೆ.
ವಿಶೇಷವೆಂದರೆ, ವಿಧಾನಪರಿಷತ್ ಕಾರ್ಯದರ್ಶಿ ಹೊರಡಿಸಿದ ಪ್ರಕಟಣೆಯಲ್ಲಿ ಅಮಾನತು ವಿಷಯ ಪ್ರಸ್ತಾಪವಾಗಿದೆ. ಆದರೆ, ವಿಧಾನಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸಿಗರು ಹರಿಹಾಯ್ದಿದ್ದಾರೆ. ಪರಿಷತ್ ಅಧಿಕಾರಿಗಳ ಪ್ರಕಾರ, ಇದು ಇರುವ ನಿಯಮ ಮತ್ತು ಪ್ರತಿ ಬಾರಿಯೂ ಇಂಥ ಸೂಚನೆಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.
ವಿಧಾನಪರಿಷತ್ತಿನ ಕಾರ್ಯವಿಧಾನ, ನಡವಳಿಕೆ ನಿಯಮಾವಳಿ 26ರ ರೀತ್ಯಾ ರಾಜ್ಯಪಾಲರಿಗೆ ಅಗೌರವ ತೋರಿದರೆ ಅಂಥ ಸದಸ್ಯರನ್ನು ಸದನದಲ್ಲಿ ಮಂಡಿಸಬಹುದಾದ ಪ್ರಸ್ತಾವದ ಮೇರೆಗೆ ಅಧಿವೇಶನ ಗೊತ್ತುಪಡಿಸಿದ ಅವಧಿಗೆ ಅಥವಾ ಉಳಿದ ಅವಧಿಗೆ ಅಮಾನತುಗೊಳಿಸಲು ಇರುವ ಅವಕಾಶದ ಬಗ್ಗೆ ಲಘು ಪ್ರಕಟಣೆ ಉಲ್ಲೇಖಿಸಿ ಶಾಸಕರ ಗಮನಕ್ಕೆ ತರಲಾಗಿದೆ.
ಕಾಂಗ್ರೆಸ್ ಚರ್ಚೆ
ಪೌರತ್ವ ತಿದ್ದಪಡಿ ಕಾಯ್ದೆ ವಿಚಾರ ಮುಂದಿಟ್ಟುಕೊಂಡು ಜಂಟಿ ಅಧಿವೇಶನದ ಮೊದಲ ದಿನ ಯಾವ ರೀತಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್ ನಾಯಕರು ಅನೌಪಚಾರಿಕ ಚರ್ಚೆ ನಡೆಸಿದ್ದಾರೆ.
ಕೇರಳ, ಪಶ್ಚಿಮಬಂಗಾಳ ರೀತಿ ಇಲ್ಲಿಯೂ ರಾಜ್ಯಪಾಲರ ಭಾಷಣ ಬಹಿಷ್ಕರಿಸಬೇಕೇ? ಕಪ್ಪು ಪಟ್ಟಿ ಧರಿಸಿ ಸದನದಲ್ಲಿ ಹಾಜರಾಗಬೇಕೇ? ಭಾಷಣಕ್ಕೆ ಅವಕಾಶ ಕೊಡದಂತೆ ಮಾಡಲು ಸಾಧ್ಯವೇ? ಅಥವಾ ಶಾಂತಿಯುತವಾಗಿದ್ದು ಚರ್ಚೆ ವೇಳೆ ಅಭಿಪ್ರಾಯ ದಾಖಲಿಸಬೇಕೆ ಎಂಬ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಲಾಪಕ್ಕೆ ಮುನ್ನ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.