2019 ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ 11 ಮತ್ತು ಗುಜರಾತ್​ನ 4 ಕ್ಷೇತ್ರಗಳಿಗೆ ಈ ಪಟ್ಟಿ ಸೀಮಿತಗೊಂಡಿದೆ. ತನ್ನ ಸಾಂಪ್ರದಾಯಿಕ ಕ್ಷೇತ್ರಗಳಾದ ರಾಯ್​ಬರೇಲಿ ಮತ್ತು ಅಮೇಥಿಯಲ್ಲಿ ಕ್ರಮವಾಗಿ ಯುಪಿಎ ಆಧಿನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಕಣಕ್ಕಿಳಿಸುತ್ತಿದೆ.

ಗುಜರಾತ್​ನಲ್ಲಿ ಬಿಜೆಪಿಯ ಹಿಡಿತವಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕಾಂಗ್ರೆಸ್​ ಭಾರಿ ಪೈಪೋಟಿ ನೀಡುವ ಸುಳಿವು ನೀಡಿದೆ. ಎಸ್​ಸಿ ಮೀಸಲು ಕ್ಷೇತ್ರ ಅಹಮದಾಬಾದ್​ ಪಶ್ಚಿಮ-ಎಸ್​ಸಿಯಲ್ಲಿ ರಾಜು ಪರಮಾರ್​, ಆನಂದ ಕ್ಷೇತ್ರದಲ್ಲಿ ಭಾರತ್​ಸಿಂಗ್​ ಎಂ. ಸೋಲಂಕಿ, ವಡೋದರದಲ್ಲಿ ಪ್ರಶಾಂತ್​ ಪಟೇಲ್​ ಮತ್ತು ಎಸ್​ಟಿ ಮೀಸಲು ಕ್ಷೇತ್ರ ಛೋಟಾ ಉದಯ್​ಪುರ್​ದಲ್ಲಿ ರಣಜಿತ್​ ಮೋಹನ್​ಸಿಂಗ್​ ರಾತ್ವಾ ಸ್ಪರ್ಧಿಸಲಿದ್ದಾರೆ.

ಉತ್ತರ ಪ್ರದೇಶದ ಫರೂಕಾಬಾದ್​ನಿಂದ ಸಲ್ಮಾನ್​ ಖುರ್ಷೀದ್​ ಕಣಕ್ಕಿಳಿಯುತ್ತಿದ್ದಾರೆ. ಉತ್ತರ ಪ್ರದೇಶದ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ. (ಏಜೆನ್ಸೀಸ್​)