ಸಿದ್ದರಾಮಯ್ಯ ವಿರುದ್ಧ ಲಘುವಾಗಿ ಹೇಳಿಕೆ ನೀಡಿದ್ದ ಶೋಭಾ ಬಾಯಿಗೆ ಬೀಗ ಹಾಕಲಿ

ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕರನ್ನು ಹಿಡಿತದಲ್ಲಿ ಇರಿಸಿಕೊಳ್ಳಲಾಗದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳೆ ತೊಟ್ಟುಕೊಳ್ಳಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಆವರಣದಿಂದ ಹನುಮಂತಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶೋಭಾ ಕರಂದ್ಲಾಜೆ ಅವರಿಗೆ ಸಾಂಕೇತಿಕವಾಗಿ ಸೀರೆ, ಬಳೆ ಹಾಗೂ ಪ್ಯಾಂಟ್, ಶರ್ಟ್ ಕಳುಹಿಸಿಕೊಡಲು ನಿರ್ಧರಿಸಿ, ಇವುಗಳಲ್ಲಿ ಯಾವುದನ್ನು ತೊಡಬೇಕೆಂಬುದನ್ನು ಅವರೇ ತೀರ್ವನಿಸಿಕೊಳ್ಳಲಿ. ಅಲ್ಲದೆ ತಕ್ಷಣ ಸಿದ್ದರಾಮಯ್ಯ ಅವರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಬಳೆ ತೊಟ್ಟುಕೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಹೇಳುವ ಮೂಲಕ ಶೋಭಾ ಕರಂದ್ಲಾಜೆ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸಂಸ್ಕೃತಿ ಬಗ್ಗೆ ಮಾತನಾಡುವವರು ಹಿಂದು ಮಹಿಳೆಯರು ಆಚರಿಸುವ ಸಂಸ್ಕೃತಿಯನ್ನೂ ಅನುಸರಿಸಬೇಕಾಗುತ್ತದೆ. ಅದಿಲ್ಲದೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಯಾವುದೆ ನೈತಿಕ ಹಕ್ಕಿಲ್ಲ ಎಂದು ಪ್ರತಿಕ್ರಿಯಿಸಿದರು.

ಕ್ಷೇತ್ರದಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಸಮಸ್ಯೆ ಬಗ್ಗೆ ಮಾತನಾಡದ ಶೋಭಾ ಕರಂದ್ಲಾಜೆ, ಇಂತಹ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು ಸರಿಯಲ್ಲ. ಬಿಜೆಪಿ ಮುಖಂಡರು ಶೋಭಾ ಕರಂದ್ಲಾಜೆ ಅವರ ನಾಲಗೆಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಹಿಂದು ಸಂಪ್ರದಾಯದಲ್ಲಿ ಬಳೆಗಳಿಗೆ ಮಹತ್ವದ ಸ್ಥಾನವಿದೆ. ನಾವು ಹಿಂದು ಸಂಸ್ಕೃತಿಯ ರಾಯಭಾರಿ ಎಂದು ಹೇಳಿಕೊಳ್ಳುವ ಶೋಭಾ ಕರಂದ್ಲಾಜೆ ಹಿಂದುತ್ವ ಮತ್ತು ಮಹಿಳೆಯನ್ನು ಅಪಮಾನಿಸುವ ಕೆಲಸ ಮಾಡಿದ್ದಾರೆ. ಬಳೆ ಕೇವಲ ಅಲಂಕಾರಿಕ ವಸ್ತುವಲ್ಲ. ಅದು ಮಹಿಳೆಗೆ ಗೌರವ ತಂದುಕೊಡುತ್ತದೆ. ಶೋಭಾ ತಾನೂ ಮಹಿಳೆ ಎಂಬುದನ್ನು ಮರೆತು ಮಾತನಾಡಿದ್ದಾರೆ ಎಂದು ಟೀಕಿಸಿದರು.

ಮುಖಂಡ ಎ.ಎನ್.ಮಹೇಶ್ ಮಾತನಾಡಿ, ಹಿಂದು ಸಂಸ್ಕೃತಿ ಮತ್ತು ಭಾರತೀಯತೆ ಬಗ್ಗೆ ಮಾತನಾಡುವ ಶೋಭಾ ಕರಂದ್ಲಾಜೆ ಭಾರತೀಯ ಮಹಿಳೆಯರನ್ನು ಅವಮಾನಿಸುವ ರೀತಿ ಮಾತನಾಡಿದ್ದು ಖಂಡನೀಯ. ಹಿಂದು ಸಮಾಜದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅವರಿಗೆ ಬುದ್ಧಿ ಹೇಳಲಿ ಎಂದರು.

Leave a Reply

Your email address will not be published. Required fields are marked *