ಆರ್. ಶಂಕರ ವಿರುದ್ಧ ಕೈ ಪ್ರತಿಭಟನೆ

ರಾಣೆಬೆನ್ನೂರ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ಆರ್. ಶಂಕರ ನಡೆ ಖಂಡಿಸಿ ಹಾಗೂ ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ನ ತಾಲೂಕು ಹಾಗೂ ನಗರ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಸಂಗಮ್ ವೃತ್ತದ ಮೂಲಕ ಪೋಸ್ಟ್ ವೃತ್ತಕ್ಕೆ ಬಂದು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ, ಕ್ಷೇತ್ರದ ಜನರ ಮಾನ ಹರಾಜು ಮಾಡಿದ್ದಾರೆ ಎಂದು ಆರೋಪಿಸಿ ಶಂಕರ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಶಂಕರ ವಿರುದ್ಧ ಘೊಷಣೆ ಕೂಗಿದರು.

ನಗರ ಘಟಕದ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಆರ್. ಶಂಕರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ಮರಕೋತಿ ಆಟವಾಡುತ್ತಿದ್ದಾರೆ. ಅವರ ವರ್ತನೆಯಿಂದ ರಾಜ್ಯದಲ್ಲಿ ರಾಣೆಬೆನ್ನೂರಿನ ಜನತೆಯ ಮಾನ ಹರಾಜು ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿರುವುದು ಸೂಕ್ತವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಣೆಬೆನ್ನೂರ ಕ್ಷೇತ್ರದ ಜನರಿಗೆ ಮೋಸ ಮಾಡಿದ ಆರ್. ಶಂಕರಗೆ ತಕ್ಕಪಾಠ ಕಲಿಸಬೇಕು. ಈ ಕುರಿತು ರಾಜ್ಯಪಾಲರು, ರಾಷ್ಟ್ರಪತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಡಾ. ಆರ್.ಎಂ. ಕುಬೇರಪ್ಪ, ಮಂಜನಗೌಡ ಪಾಟೀಲ, ಬಸವರಾಜ ಹುಚ್ಚಗೊಂಡರ, ರವೀಂದ್ರಗೌಡ ಪಾಟೀಲ, ಶೇರುಖಾನ್ ಖಾಬುಲಿ, ಬಸಣ್ಣ ಮರದ, ರಾಮಣ್ಣ ಲಮಾಣಿ, ಕೃಷ್ಣಪ್ಪ ಕಂಬಳಿ, ಶಶಿಧರ ಬಸೇನಾಯ್ಕರ, ಭೀರಪ್ಪ ಲಮಾಣಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *