ಕೆಟ್ಟುನಿಂತ ಹೆಲಿಕಾಪ್ಟರ್​ ರಿಪೇರಿ ಮಾಡಲು ನೆರವಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ!

ಉನಾ (ಹಿಮಾಚಲಪ್ರದೇಶ): ಕೊನೆಯ ಎರಡು ಹಂತದ ಮತದಾನ ಬಾಕಿ ಇರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ನಿರಂತರವಾಗಿ ಪ್ರಯಾಣ ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಯಾಣದ ನಡುವೆಯೂ ಅವರು ತಾವು ಪ್ರಯಾಣಿಸುವ ಹೆಲಿಕಾಪ್ಟರ್​ ಕೆಟ್ಟು ನಿಂತಾಗ ಪೈಲಟ್​ಗಳ ಜತೆ ಸೇರಿ ಅದನ್ನು ರಿಪೇರಿ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ.

ಶುಕ್ರವಾರ ರಾಹುಲ್​ ಗಾಂಧಿ ಹಿಮಾಚಲಪ್ರದೇಶದ ಉನಾದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಲ್ಯಾಂಡ್​ ಆಗಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತಕ್ಷಣ ಪೈಲಟ್​ಗಳು ಮತ್ತು ತಾಂತ್ರಿಕ ಸಿಬ್ಬಂದಿಯ ಜತೆ ಕೈಜೋಡಿಸಿದ ರಾಹುಲ್​ ಗಾಂಧಿ ಹೆಲಿಕಾಪ್ಟರ್​ ರಿಪೇರಿ ಮಾಡಲು ನೆರವಾದರು. ಹೆಲಿಕಾಪ್ಟರ್​ನ ಸಮಸ್ಯೆ ಸರಿಪಡಿಸಿದ ನಂತರ ಅಲ್ಲಿಂದ ತೆರಳಿದರು.

ಹೆಲಿಕಾಪ್ಟರ್​ ರಿಪೇರಿ ಮಾಡುತ್ತಿರುವ ಫೋಟೋವನ್ನು ರಾಹುಲ್​ ಗಾಂಧಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜತೆಗೆ ‘ಒಂದು ಉತ್ತಮ ಟೀಂ ವರ್ಕ್​ ಎಂದರೆ ಎಲ್ಲರೂ ಕೈಜೋಡಿಸಿ ಕೆಲಸ ಮಾಡುವುದು. ಉನಾದಲ್ಲಿ ನಮ್ಮ ಹೆಲಿಕಾಪ್ಟರ್​ನಲ್ಲಿ ಸಮಸ್ಯೆ ಕಂಡು ಬಂದಿತ್ತು. ತಕ್ಷಣ ನಾವೆಲ್ಲರೂ ಸೇರಿ ಅದನ್ನು ಸರಿಪಡಿಸಿದೆವು. ಸಮಸ್ಯೆ ಗಂಭೀರವಾಗಿರಲಿಲ್ಲ’ ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.

ರಾಹುಲ್​ ಗಾಂಧಿ ಹೆಲಿಕಾಪ್ಟರ್​ ರಿಪೇರಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ ರಾಹುಲ್​ ಶೇರ್​ ಮಾಡಿರುವ ಫೋಟೋಗೆ 97 ಸಾವಿರ ಲೈಕ್​ಗಳು ಬಂದಿದ್ದು, ನೂರಾರು ಕಾಮೆಂಟ್​ಗಳು ಬಂದಿವೆ.

ರಾಹುಲ್​ ಗಾಂಧಿ ಅವರ ತಂದೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ತರಬೇತಿ ಪಡೆದ ಪೈಲಟ್​ ಆಗಿದ್ದರು. ಜತೆಗೆ ಅವರು ಒಂದಷ್ಟು ಸಮಯ ಏರ್​ಇಂಡಿಯಾದಲ್ಲೂ ಪೈಲಟ್​ ಆಗಿ ಕೆಲಸ ಮಾಡಿದ್ದರು. (ಏಜೆನ್ಸೀಸ್​)

One Reply to “ಕೆಟ್ಟುನಿಂತ ಹೆಲಿಕಾಪ್ಟರ್​ ರಿಪೇರಿ ಮಾಡಲು ನೆರವಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ!”

Comments are closed.