ಮೈಸೂರು: ಬಿಜೆಪಿ-ಜೆಡಿಎಸ್ ಕೈಗೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ ವಿರುದ್ಧ ಸಮರ ಸಾರುವ ಸಂಕೇತವಾಗಿ ಜನಾಂದೋಲನ ಸಮಾವೇಶದಲ್ಲಿ ಕಹಳೆ ಊದುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತು.
ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ, ಜೆಡಿಎಸ್‌ನ ಕುತಂತ್ರವನ್ನು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಪ್ರತಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಲಾಯಿತು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈತ್ರಿ ಪಕ್ಷಗಳು ಕೈಗೊಂಡಿರುವ ಪಾದಯಾತ್ರೆಗೆ ಕಾಂಗ್ರೆಸ್ ಸೆಡ್ಡು ಹೊಡೆದು ಕೈ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.
ಸಚಿವರು, ಶಾಸಕರು, ಸಂಸದರು, ಕಾಂಗ್ರೆಸ್‌ನ ಮುಂಚೂಣಿ ಘಟಕದ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿ ಸಿಎಂಗೆ ಬೆಂಬಲ ವ್ಯಕ್ತಪಡಿಸಿದರು. ಇದರೊಂದಿಗೆ ಪಾದಯಾತ್ರೆ ವಿರುದ್ಧ ಸಾಂಘಿಕ ಹೋರಾಟದ ಎಚ್ಚರಿಕೆಯನ್ನೂ ರವಾನಿಸಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗಮಿಸಿ ಸಿಎಂಗೆ ಬಲ ತುಂಬಿದರು.
ಮಹಾರಾಜ ಕಾಲೇಜು ಮೈದಾನವು ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿತ್ತು. ಸಿಎಂ ಪರವಾಗಿ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತು. ಸಿದ್ದರಾಮಯ್ಯ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಕಾರ್ಯಕರ್ತರು ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿದರು.
ಡಿ.ಕೆ.ಶಿವಕುಮಾರ್ ಮಾತನಾಡುವ ವೇಳೆ ಮೈತ್ರಿ ಪಕ್ಷಗಳ ನಾಯಕರು ಈ ಹಿಂದೆ ಪರಸ್ಪರ ಟೀಕೆ ಮಾಡಿದ್ದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಮುಡಾ ಹಗರಣದಲ್ಲಿ ಮೈತ್ರಿ ಪಕ್ಷಗಳು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜನರಿಗೆ ಸತ್ಯಾಂಶ ಹೇಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಪ್ರಕಟಿಸಿರುವ ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರು ಕಳಂಕ ರಹಿತ ಸತ್ಯಶೋಧನಾ ಪುಸ್ತಕ’ ವನ್ನು ಬಿಡುಗಡೆ ಮಾಡಲಾಯಿತು.
ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಜಮೀರ್ ಅಹಮ್ಮದ್, ಈಶ್ವರ ಖಂಡ್ರೆ, ಎನ್.ಚಲುವರಾಯಸ್ವಾಮಿ, ರಹೀಂಖಾನ್, ಡಾ.ಶರಣಪ್ರಕಾಶ ಪಾಟೀಲ್, ಕೆ.ವೆಂಕಟೇಶ್, ಶಿವರಾಜ ಎಸ್.ತಂಗಡಿ, ಡಿ.ಸುಧಾಕರ್, ಕೆ.ಎನ್.ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಎಂ.ಸಿ.ಸುಧಾಕರ್, ಎನ್.ಎಸ್.ಬೋಸರಾಜು, ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ವಸಂತ್ ಕುಮಾರ್, ವಿನಯ್ ಕುಲಕರ್ಣಿ, ತನ್ವೀರ್ ಸೇಠ್, ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಡಾ.ಡಿ.ತಿಮ್ಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇನ್ನಿತರರಿದ್ದರು.