ಕಾಂಗ್ರೆಸ್ ಜಾತಿ ದಾಳದ ಎದುರು ಎಡವಿದ ಬಿಜೆಪಿ

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ

ಕಾಂಗ್ರೆಸ್ ರೂಪಿಸಿದ ಜಾತಿ ರಾಜಕಾರಣದ ದಾಳದ ಎದುರಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ ಬಿಜೆಪಿ ಆರಂಭದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದೆ.

ಪುರಸಭೆ ಚುನಾವಣೆಯ ವಾರ್ಡ್ ಸಂಖ್ಯೆ 18ರಲ್ಲಿ ಮುಸ್ಲಿಂ ಅಭ್ಯರ್ಥಿ ಎದುರಿಗೆ ಅದೇ ಸಮುದಾಯದ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟು ಸ್ಪರ್ಧೆಗೆ ನಿಲ್ಲಿಸಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ತಂತ್ರಗಾರಿಕೆ ಫಲಿಸಲಿಲ್ಲ. ಬಿಜೆಪಿ ‘ಬಿ’ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಸಮಾಜದ ಹಾಗೂ ಕುಟುಂಬದ ಒತ್ತಡಕ್ಕೆ ಮಣಿದು ನಾಮಪತ್ರ ವಾಪಸ್ ಪಡೆದಿದ್ದು, ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಲು ಕಾರಣರಾಗಿದ್ದಾರೆ. ಇನ್ನು ಸ್ಪರ್ಧೆ ಒಡ್ಡುವ ಕ್ಷೇತ್ರಗಳಲ್ಲಷ್ಟೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿಎಸ್ ನಾಯಕರು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡಲು ಪಕ್ಷೇತರರರೊಂದಿಗೆ ಸೆಡ್ಡು ಹೊಡೆಯಲು ಸಜ್ಜುಗೊಂಡಿದ್ದಾರೆ.

ಫಲ ಕೊಟ್ಟ ಕಾಂಗ್ರೆಸ್ ತಂತ್ರ: ವಾರ್ಡ್ ಸಂಖ್ಯೆ 18ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಲ್ಲಾಭಕ್ಷ ಢವಳಗಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಹ್ಮದ್​ಇಕ್ಬಾಲ್ ಮೂಲಿಮನಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕುಟುಂಬ ಹಾಗೂ ಸಮಾಜದವರ ತೀವ್ರ ಒತ್ತಡಕ್ಕೆ ಮಣಿದ ಕೊನೆಗೆ ನಾಮಪತ್ರ ಹಿಂಪಡೆಯುವ ನಿರ್ಧಾರ ಕೈಗೊಂಡು ಬಿಜೆಪಿ ಮುಖಭಂಗ ಅನುಭವಿಸಲು ಕಾರಣರಾದರು. ನೇರ ಸ್ಪರ್ಧೆ ಇದ್ದ ಈ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರಿಂದ ಕಾಂಗ್ರೆಸ್​ಗೆ ಮೊದಲ ಜಯ ಲಭಿಸಿತು.

ಹಿಂದೆ ಸರಿದ ಕೈ ಅಭ್ಯರ್ಥಿ

ವಾರ್ಡ್ ಸಂಖ್ಯೆ 4ರಲ್ಲಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಹುಸೇನಭಾಷಾ ಸಾಲಿಮನಿ(ಪಿಂಟು) ತಮ್ಮದೆ ಸಮುದಾಯ ಪಕ್ಷೇತರ ಅಭ್ಯರ್ಥಿಯಾಗಿದ್ದ ಶಬ್ಬೀರ್ ಬಾಗಲಕೋಟ ಅವರಿಗೆ ಬೆಂಬಲ ವ್ಯಕ್ತಪಡಿಸಿ ನಾಮಪತ್ರ ಹಿಂಪಡೆದರು. ಈ ನಡೆ ತೀವ್ರ ಅಚ್ಚರಿಗೆ ಕಾರಣವಾಗಿದ್ದು, ಪಕ್ಷೇತರ ಅಭ್ಯರ್ಥಿ ಇನ್ನುಳಿದ ಎರಡು ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪೆಟ್ಟು ನೀಡುವ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್​ನಿಂದ ಈ ವಾರ್ಡ್​ನಲ್ಲಿ ಸ್ಪರ್ಧಿಸಿದ್ದ ಅಧಿಕೃತ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

ಬಿಜೆಪಿಗೆ ಕೈಗೂಡದ ಅವಿರೋಧ ಆಯ್ಕೆ

ಸದ್ಯದ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 17ರಲ್ಲಿ ಹಿರಿಯ ಅಭ್ಯರ್ಥಿಯಾಗಿರುವ ಚೆನ್ನಪ್ಪ ಕಂಠಿ ಅವರ ಅವಿರೋಧ ಆಯ್ಕೆಗೆ ಇಡೀ ವಾರ್ಡ್ ನ ನಾಗರಿಕರು ಶಕ್ತಿಮೀರಿ ಶ್ರಮಿಸಿದರು. ಆದರೂ ಓರ್ವ ಪಕ್ಷೇತರ ಅಭ್ಯರ್ಥಿ ಮಾತ್ರ ನಾಮಪತ್ರ ಹಿಂಪಡೆಯಲು ಬಿಜೆಪಿ ನಾಯಕರ ಕೈಗೆ ಕಡೆವರೆಗೆ ಸಿಗಲೇ ಇಲ್ಲ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಚೆನ್ನಪ್ಪ ಕಂಠಿ ಅವಿರೋಧ ಆಯ್ಕೆ ಆಸೆ ಕೈಗೂಡಲಿಲ್ಲ.