ಜಾಧವ್ ಹೊರಗಟ್ಟಲು ಮುಂದಾದ ಕೈ ನಾಯಕರು

| ಜಯತೀರ್ಥ ಪಾಟೀಲ

ಕಲಬುರಗಿ: ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಕೈ ಪಾಳಯದಿಂದ ಜಾರುತ್ತಿದ್ದಾರೆ ಎಂಬುದು ಒಂದೆಡೆಯಾದರೆ, ಕಾಂಗ್ರೆಸ್​ನಿಂದಲೇ ಅವರನ್ನು ಹೊರದಬ್ಬಲಾಗುತ್ತಿದೆ ಎಂಬ ಮಾತು ಇನ್ನೊಂದು ವಲಯದಲ್ಲಿ ಕೇಳಿಬರುತ್ತಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ, ಪಂಗಡ ಘಟಕದ ಪ್ರಮುಖ ಸಭೆಯಲ್ಲಿ ಹಾಕಿರುವ ಬ್ಯಾನರ್​ನಲ್ಲಿ ಡಾ.ಜಾಧವ್ ಹೆಸರು, ಭಾವಚಿತ್ರ ಕೈಬಿಟ್ಟಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಸಿಎಲ್​ಪಿ ಸಭೆಗೆ ಗೈರು ಹಾಜರಾಗಿ ಮುಂಬೈನಲ್ಲಿ ಬೀಡುಬಿಟ್ಟಿರುವ ಡಾ.ಜಾಧವ್ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂಬ ಮಾಹಿತಿ ಇದೆ. ಆದರೆ ಈಗಲೂ ಅಧಿಕೃತವಾಗಿ ಕಾಂಗ್ರೆಸ್​ನಲ್ಲೇ ಇದ್ದು, ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಜಿಲ್ಲಾ ಕಾಂಗ್ರೆಸ್​ನಲ್ಲಿ ಜಾಧವ್​ರನ್ನು ಈಗಿನಿಂದಲೇ ಹೊರಗಿಡುತ್ತಿರುವುದು ಅಚ್ಚರಿ ಮೂಡಿಸಿದ್ದು, ಬೆಂಬಲಿಗರಲ್ಲಿ ಪಕ್ಷದ ಮುಖಂಡರ ಈ ನಡೆ ತೀವ್ರ ಆಕ್ರೋಶ ಮೂಡಿಸಿದೆ.

ಕೈ ಪಾಳಯದಿಂದ ಜಾರಿರುವ ಡಾ.ಜಾಧವ್ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಬಂಜಾರ ಸಮುದಾಯದವರನ್ನು ಭೇಟಿ ಮಾಡಿ ರ್ಚಚಿಸುತ್ತಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಇದೀಗ ಬಹಿರಂಗವಾಗಿದೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಸೋಲಿಸೋದಕ್ಕೆ ತೆರೆಮರೆಯಲ್ಲಿ ಗೇಮ್ ಪ್ಲಾ್ಯನ್ ನಡೆಯುತ್ತಿದೆ ಎನ್ನಲಾಗಿದೆ. ಜಾಧವ್​ರ ಈ ನಡೆ ಬಿಜೆಪಿ ಸೇರ್ಪಡೆ ಆಗುವುದನ್ನು ಬಹುತೇಕ ಖಚಿತಪಡಿಸಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದ ಮತದಾರರ ಜತೆ ಮಾತುಕತೆ ನಡೆಸಿರುವ ಜಾಧವ್, ಕೇತ್ರದಲ್ಲಿ 30-40 ಸಾವಿರ ಬಂಜಾರ ಸಮುದಾಯದ ಮತದಾರರಿದ್ದಾರೆ. ಮುಂಬೈನ ಬಾಂದ್ರಾ, ಅಲಿಬಾಗ್, ಕಲ್ಯಾಣ ಬರೋಲಿಯಲ್ಲಿರುವ ಮತದಾರರನ್ನು ಸಂರ್ಪಸಿದ್ದಾರೆ. ಚಿಂಚೋಳಿ ಕ್ಷೇತ್ರದ 15 ಸಾವಿರ ಮತದಾರರ ಜತೆ ಮೊದಲ ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಒಟ್ಟಾರೆ ಡಾ.ಜಾಧವ್ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಬಿಜೆಪಿ ಸೇರ್ಪಡೆ, ಲೋಕಸಭೆ ಚುನಾವಣೆಗೆ ಸಿದ್ಧತೆ, ಮತದಾರರು, ಬಂಜಾರ ಮುಖಂಡರು, ಮತದಾರರನ್ನು ಭೇಟಿ ಮಾಡಿ ಸಲಹೆ, ಸೂಚನೆ ಪಡೆದುಕೊಳ್ಳುತ್ತಿದ್ದಾರೆ.

ಉಮೇಶ್ ಬಿಜೆಪಿಗೆ ಹೋಗೋದಾದ್ರೆ ಹೋಗ್ಲಿ

ಕಲಬುರಗಿ: ಒಳ್ಳೆಯದಾದ್ರೆ ಯಾರೂ ಹೇಳೋದಿಲ್ಲ. ಕೆಟ್ಟದಾದ್ರೆ ಎಲ್ಲರೂ ನಮ್ಮ ತಲೆಗೆ ಕಟ್ಟುತ್ತಾರೆ. ಇದಕ್ಕೆ ಮಾಲೀಕಯ್ಯ, ಜಾಧವ್, ಚಿಂಚನಸೂರ್ ಯಾರೂ ಹೊರತಾಗಿಲ್ಲ… -ಬಿಜೆಪಿ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿರುವ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಡಿದ ಮಾತುಗಳಿವು.

ಅಧಿಕಾರಿಗಳ ವರ್ಗಾವಣೆಯೊಂದೇ ಅಲ್ಲ, ಯಾವುದೇ ವಿಷಯದಲ್ಲಿ ನಾನು ಯಾರ ಕ್ಷೇತ್ರದಲ್ಲೂ ಹಸ್ತಕ್ಷೇಪ ಮಾಡಿಲ್ಲ, ಮಾಡೋದೂ ಇಲ್ಲ. ಜಾಧವ್ ಬಿಜೆಪಿ ಹೋಗುವುದಿದ್ದರೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಆರೋಪ ಮಾಡಿ ಹೋಗೋದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಜಾಧವ್​ಗೆ ಸಂದೇಶ ಕೊಡೋದಕ್ಕೆ ಅವರೇನೂ ಅವಿವೇಕಗಳಲ್ಲ. 2 ಲಕ್ಷ ಮತದಾರರಿಂದ ಆಯ್ಕೆ ಆಗಿ ಬಂದಿದ್ದಾರೆ. ಬಿಜೆಪಿಯವರ ಬಳಿ ಅಭ್ಯರ್ಥಿ ಇಲ್ಲ. ಹೀಗಾಗಿ ಜಾಧವ್ ಸೆಳೆಯೋಕೆ ಮುಂದಾಗಿದ್ದಾರೆ. ಆದರೂ ಲೋಕಸಭಾ ಚುನಾವಣೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಮಾರ್ವಿುಕವಾಗಿ ನುಡಿದರು.

ನಾನು ಜಾಧವ್ ವಿಚಾರದಲ್ಲಿ ಮಾತಾಡೋಕೆ ಹೋಗಲ್ಲ. ಸಂಪುಟ ವಿಸ್ತರಣೆ ನಂತರ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. 11ರಂದು ನಾನೇ ಖುದ್ದಾಗಿ ಜಾಧವ್ ಜತೆ ಮಾತಾಡಿದ್ದೇನೆ. ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತೇನೆ ಅಂದಿದ್ದರು. ಅದಾದ ಮೇಲೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರು.

ಪಕ್ಷ ಹೇಳಿದ್ರೆ ಮಂತ್ರಿ ಸ್ಥಾನ ಬಿಡೋದಕ್ಕೂ ಸಿದ್ಧ. ಶಾಸಕ ಸ್ಥಾನಕ್ಕೂ ನಿಲ್ಲಬೇಡ ಅಂದರೆ ನಿಲ್ಲೋದಿಲ್ಲ. ಡೆಸ್ಕ್ ನಲ್ಲಿ ಕುಳಿತು ಪಕ್ಷ ಸಂಘಟನೆಯ ಕೆಲಸ ಮಾಡು ಅಂದ್ರೆ ಮಾಡ್ತಿನಿ.

| ಪ್ರಿಯಾಂಕ್ ಖರ್ಗೆ, ಸಚಿವ