ಸಿನಿಮಾ

ಪರಮೇಶ್ವರ ಭರ್ಜರಿ ಮತಬೇಟೆ

ಕೊರಟಗೆರೆ: ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಪರವಾಗಿ ತಾಲೂಕಿನೆಲ್ಲೆಡೆ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಮಂಗಳವಾರ ವಡ್ಡಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಮುಖಂಡರು ಮತಯಾಚಿಸಿದರು.

ವಡ್ಡಗೆರೆ ವೀರನಾಗಮ್ಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಪ್ರಚಾರಕ್ಕೆ ಮಾಜಿ ಸಚಿವ ಬಿ.ಸೋಮಶೇಖರ್ ಸಾಥ್ ನೀಡಿದರು. ಗ್ರಾಮಸ್ಥರು ಡಾ.ಜಿ ಪರಮೇಶ್ವರ ಅವರನ್ನು ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ಸ್ವಾಗತಿಸಿ ಮತ ನೀಡುವ ಭರವಸೆ ನೀಡಿದ್ದು ವಿಶೇಷ ಎನಿಸಿತು.

ವಡ್ಡಗೆರೆ, ತುಂಬಾಡಿ, ಹಂಚಿಹಳ್ಳಿ, ಕ್ಯಾಮೇನಹಳ್ಳಿ ಹಾಗೂ ತೀತ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಾವಿರಾರು ಕಾರ್ಯಕರ್ತರು ಪರಮೇಶ್ವರ ಜತೆಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಡಾ.ಜಿ.ಪರಮೇಶ್ವರ ಮಾತನಾಡಿ, ಜನಸಾಮಾನ್ಯರ ಜೀವನಕ್ಕೆ ಪೂರಕವಾದ ಪ್ರಣಾಳಿಕೆ ನೀಡಿದ್ದೇನೆ. ರಾಜ್ಯದೆಲ್ಲೆಡೆ ಪ್ರಣಾಳಿಕೆ ಬಗ್ಗೆ ಸಾಮಾನ್ಯ ಜನ ಮೆಚ್ಚುಗೆ ಸೂಚಿಸಿರುವುದು ಕಾಂಗ್ರೆಸ್ ಗೆಲುವಿನ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಆದ್ಯತೆಯ ಮೇಲೆ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸುವ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.
ಮಾಜಿ ಶಾಸಕ ಗಂಗಹನುಮಯ್ಯ, ಗ್ರಾಪಂ ಅಧ್ಯಕ್ಷರಾದ ಪಾರ್ವತಮ್ಮ, ವಸಂತಕುಮಾರ್, ವಿಜಯಕುಮಾರಿ, ಸುನಂದ, ಮುಖಂಡರರಾದ ಎಚ್.ಮಹದೇವ್, ಎ.ಡಿ.ಬಲರಾಮಯ್ಯ, ವಾಲೆ ಚಂದ್ರಯ್ಯ, ಎನ್.ಜೆ. ಮಂಜುನಾಥ್, ರಮೇಶ್, ತಿಮ್ಮಜ್ಜ, ಶಿವರಾಮಯ್ಯ, ವೆಂಕಟೇಶ್, ನಾಗಭೂಷಣ್, ರಾಘವೇಂದ್ರ ಮತ್ತಿತರರು ಇದ್ದರು.

ಬಿಜೆಪಿಯಿಂದ ನಿರುದ್ಯೋಗ ಸೃಷ್ಟಿ: ಗೃಹ ಖಾತೆ ಸಚಿವನಾಗಿದ್ದಾಗ 25 ಸಾವಿರ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಆದರೆ, ಬಿಜೆಪಿಯವರು ಯುವಕರಿಗೆ ಉದ್ಯೋಗ ನೀಡಲು ಮನಸ್ಸು ಮಾಡಲೇ ಇಲ್ಲ. ಬಿಜೆಪಿಗೆ ಕಷ್ಟಕಾಲದಲ್ಲಿ ಶಕ್ತಿಕೊಟ್ಟು ಅಧಿಕಾರಕ್ಕೆ ತಂದಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಅಧಿಕಾರಕ್ಕಾಗಿ ದೇಶದ ಪ್ರಧಾನಿಯನ್ನು ಗ್ರಾಪಂ ಹಂತಕ್ಕೆ ಕರೆತಂದು ಪ್ರಚಾರ ನಡೆಸಲಾಗುತ್ತಿದೆ ಎಂದು ಡಾ.ಪರಮೇಶ್ವರ ಹರಿಹಾಯ್ದರು.

ಜೆಡಿಎಸ್ ಚುಚ್ಚು ಮಾತಿನಿಂದ ಬೇಸರ: 2018ರಲ್ಲಿ ನಾವು ಹೆಚ್ಚು ಸ್ಥಾನ ಗೆದ್ದರೂ ಜೆಡಿಎಸ್‌ಗೆ ಸಿಎಂ ಸ್ಥಾನ ನೀಡಿದೆವು. ಆದರೆ, ಕುಮಾರಸ್ವಾಮಿಗೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ನನ್ನ ಬಗ್ಗೆ ಹಗುರವಾದ ಮಾತನ್ನಾಡುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್ ಜೆಡಿಎಸ್‌ಗೆ ನಮ್ಮ ಜಿಲ್ಲೆಯ ಸ್ಥಾನ ಬಿಟ್ಟುಕೊಟ್ಟಾಗ ದೇವೇಗೌಡರು ಬಂದರು. ನಾವೆಲ್ಲಾ ನಿಷ್ಠೆಯಿಂದ ಜಿಲ್ಲೆ ಸುತ್ತಿದೆವು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ 7,000 ಮುನ್ನಡೆ ನೀಡಿದ್ದೇವೆ, ಆದರೆ, ಹೊಳವನಹಳ್ಳಿಯಲ್ಲಿ ನನ್ನ ಸೋಲಿಸಿದವರ ಸೋಲಿಸಿ ಎಂದು ಭಾಷಣ ಮಾಡಿರುವುದು ಬೇಸರ ತರಿಸಿದೆ ಎಂದು ಪರಮೇಶ್ವರ ಹೇಳಿದರು.

ಕೊರಟಗೆರೆಯಲ್ಲಿ ಕೈಗೆ ಬಲ: ಸ್ಥಳೀಯ ಮುಖಂಡ ಗಂಗಾಧರರೆಡ್ಡಿ ಹಾಗೂ ಅಪಾರ ಬೆಂಬಲಿಗರು ಜೆಡಿಎಸ್ ತೊರೆದು ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬುಕ್ಕಾಪಟ್ಟಣ ಗ್ರಾಪಂನ ವೀರಣ್ಣ ಅವರು ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಕೊರಟಗೆರೆಯಲ್ಲಿ ದೇವೇಗೌಡರನ್ನು ಸೋಲಿಸಲು ಪ್ರಯತ್ನಿಸಿದವರು ಯಾರು ಎಂಬುದನ್ನು ದೇವೇಗೌಡರು ಸ್ಪಷ್ಟವಾಗಿ ಹೇಳಬೇಕು. ಏಕೆಂದರೆ ನಾನು ನನ್ನ ಕ್ಷೇತ್ರದಲ್ಲಿ ಅವರಿಗೆ 7 ಸಾವಿರ ಮುನ್ನಡೆ ಕೊಡಿಸಿದ್ದೆ, ಅವರ ಪಕ್ಷದವರೇ ಅವರ ಸೋಲಿಗೆ ಯತ್ನಿಸಿರಬಹುದು. ನನ್ನ ಕ್ಷೇತ್ರದ ಜನರು ದಡ್ಡರಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಭಿವೃದ್ಧಿ, ಜನಸೇವೆ ಹಾಗೂ ಪ್ರಾಮಾಣಿಕತೆಗೆ ಮನ್ನಣೆ ನೀಡುತ್ತಾರೆ. | ಡಾ.ಜಿ.ಪರಮೇಶ್ವರ. ಶಾಸಕ


Latest Posts

ಲೈಫ್‌ಸ್ಟೈಲ್