ಲಿಂಗಾಯತ ಸಿಎಂಗೆ ಕಾಂಗ್ರೆಸ್ ಅಡ್ಡಗಾಲು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಲಿಂಗಾಯತ ಸಿಎಂ ಆಗದಿರುವಂತೆ ಕಾಂಗ್ರೆಸ್ ನೋಡಿಕೊಳ್ಳುತ್ತಿದೆ. ವೀರೇಂದ್ರ ಪಾಟೀಲ ಅವರನ್ನು ರಾಜೀವ್​ಗಾಂಧಿ ಅರ್ಧದಲ್ಲಿಯೇ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಯಡಿಯೂರಪ್ಪ ಸಿಎಂ ಆದ ಮೇಲೆ ಕಾಂಗ್ರೆಸ್​ನವರು ಲಿಂಗಾಯತ ಮುಖಂಡರಿಂದಲೇ ಕೇಸ್ ಹಾಕಿಸಿ, ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ನೋಡಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಟ್ಟ 4 ಎಕರೆ ಜಮೀನು ಕುರಿತು ಎಸ್​ಐಟಿ ತನಿಖೆಗೆ ಅರ್ಜಿ ಹಾಕಿಸಿದ್ದರು. ಕ್ರಿಮಿನಲ್ ಕೇಸ್ ಹಾಕಿದ್ದರು. ಅವೆಲ್ಲ ಬಿದ್ದು ಹೋದವು. ಕಾಂಗ್ರೆಸ್​ನವರಿಗೆ ಲಿಂಗಾಯತರು ಬೆಳೆಯುವುದು ಬೇಕಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಮುಖಂಡರ ಮಧ್ಯೆ ಒಳ ಜಗಳ ನಡೆಯುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯ ತಾನು ಮತ್ತೆ ಸಿಎಂ ಯಾಕೆ ಆಗಬಾರದು ಎನ್ನುತ್ತಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಹೇಳುತ್ತಾರೆ. ಯಾವ ಮಾತಿಗೂ ಅವರು ಬದ್ಧರಾಗಿರುವವರಲ್ಲ ಎಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರೆ, ಎಚ್.ಡಿ. ರೇವಣ್ಣ ಯಾಕಾಗಬಾರದು ಎಂದು ಸಿದ್ದು ಟ್ವೀಟ್ ಮಾಡುತ್ತಾರೆ. ಖರ್ಗೆ, ಡಾ. ಜಿ. ಪರಮೇಶ್ವರ ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ಯಾಕೆ ಹೇಳುವುದಿಲ್ಲ? 2013ರಲ್ಲಿ ಡಾ. ಪರಮೇಶ್ವರ ಸೋಲಿಗೆ ಸಿದ್ದರಾಮಯ್ಯ ಕಾರಣರಾಗಿದ್ದರು ಎಂದು ಕುಟುಕಿದ ಶೆಟ್ಟರ್, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ, ಕನಸು ಕಾಣಬಹುದಷ್ಟೆ ಎಂದು ಛೇಡಿಸಿದರು.

ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮುಖಂಡ ಮಹೇಶ ಟೆಂಗಿನಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ಹಾವಿಗೆ 12 ವರ್ಷ, ಸಿದ್ದುಗೆ ಜೀವನಪರ್ಯಂತ ದ್ವೇಷ: ಹಾವಿಗೆ 12 ವರ್ಷ ದ್ವೇಷ ಎನ್ನುತ್ತಾರೆ. ಸಿದ್ದರಾಮಯ್ಯಗೆ ಜೀವನಪರ್ಯಂತ ದ್ವೇಷ ಎಂದು ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು. ಮಾನ, ಮರ್ಯಾದೆ, ನಾಚಿಕೆ ಇಲ್ಲದ ಮನುಷ್ಯ ಅಂದರೆ ಸಿದ್ದರಾಮಯ್ಯ. ಅಭಿವೃದ್ಧಿಯಲ್ಲೂ ಅವರು ದ್ವೇಷದ ರಾಜಕಾರಣ ಮಾಡುತ್ತಾರೆ. ಹು-ಧಾ ಕುಡಿಯುವ ನೀರಿನ ಸಮಸ್ಯೆ ಜೀವಂತ ಇರಲು ಅವರೇ ಕಾರಣ. ಆವತ್ತು 26 ಕೋಟಿ ರೂ. ಮೊತ್ತದ ನೀರಿನ ಕಾಮಗಾರಿಗೆ ಒಪ್ಪಿಗೆ ಕೊಟ್ಟಿದ್ದರೆ ಇಷ್ಟೊತ್ತಿಗೆ ಕೆಲಸ ಮುಗಿದಿರುತ್ತಿತ್ತು. 10- 12 ದಿನಕ್ಕೊಮ್ಮೆ ನೀರು ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಂಸ್ಕೃತಿ ಇಲ್ಲದ ಮನುಷ್ಯ ಎಂದರೆ ಸಿದ್ದರಾಮಯ್ಯ ಎಂದು ಕುಟುಕಿದರು.

ಗೋಡ್ಸೆಗೂ ಬಿಜೆಪಿಗೂ ಸಂಬಂಧ ಇಲ್ಲ: ಗೋಡ್ಸೆ ಮತ್ತು ಬಿಜೆಪಿ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, ಗೋಡ್ಸೆಗೂ ಬಿಜೆಪಿಗೂ ಸಂಬಂಧ ಇಲ್ಲ. ನಾವು ಎಂದಿಗೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ. ನಳಿನಕುಮಾರ್ ಕಟೀಲು ಟ್ವೀಟ್ ಮಾಡಿರುವುದನ್ನು ನಾನು ನೋಡಿಲ್ಲ. ಕಟೀಲು, ಅನಂತಕುಮಾರ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಶೆಟ್ಟರ್ ಹೇಳಿದರು.

Leave a Reply

Your email address will not be published. Required fields are marked *