ಮುಂಬೈನಲ್ಲಿ ಶಾಸಕರನ್ನು ಕೂಡಿಹಾಕಲಾಗಿದೆ: ಡಿ.ಕೆ. ಸುರೇಶ್​

ನವದೆಹಲಿ: ಮುಂಬೈನಲ್ಲಿ ನಮ್ಮ ಕೆಲವು ಶಾಸಕರನ್ನು ಕೂಡಿಹಾಕಲಾಗಿದೆ. ನೀವು ನಮ್ಮ ಮಾತು ಕೇಳಿಲ್ಲ ಅಂದರೆ ನಿಮ್ಮ ರಾಜಕೀಯ ಜೀವನ ಮುಗಿಸುತ್ತೇವೆ ಎಂದು ಬಿಜೆಪಿಯಿಂದ ಬೆದರಿಕೆ ಹಾಕಲಾಗುತ್ತಿದೆ. ಈ ಕುರಿತು ದಾಖಲೆಗಳು ನಮ್ಮ ಬಳಿ ಇವೆ ಎಂದು ಕಾಂಗ್ರೆಸ್​ ಸಂಸದ ಡಿ.ಕೆ. ಸುರೇಶ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಭವನದ ಎದುರು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಆಪರೇಷನ್​ ಕಮಲದ ಕುರಿತು ರಾಷ್ಟ್ರದ ಗಮನ ಸೆಳೆಯಬೇಕು ಎಂದು ಈ ತುರ್ತು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದೇವೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಬುಡಮೇಲು ಮಾಡುತ್ತಿದ್ದಾರೆ ಎಂಬುದು ಆಗಿಂದಾಗ್ಗೆ ಸಾಬೀತಾಗುತ್ತಿದೆ. ರಾಜ್ಯ ಸರ್ಕಾರವನ್ನು ಪತನಗೊಳಿಸಲು ರಾಜ್ಯನಾಯಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಮಹಾರಾಷ್ಟ್ರ ಸರ್ಕಾರ ನೆರವು ನೀಡುತ್ತಿದೆ ಎಂದು ಡಿ.ಕೆ. ಸುರೇಶ್​ ಆರೋಪಿಸಿದರು.

ರಾಜ್ಯಪಾಲರಿಗೂ ಅಡ್ಡಿ, ಸಿಎಂಗೂ ಅಡ್ಡಗಾಲು

ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಲು ಬಿಜೆಬಿ ಸದಸ್ಯರು ಬಿಡಲಿಲ್ಲ. ಆ ಮೂಲಕ ಬಿಜೆಪಿ ಸಂಸದರು ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ. ಜತೆಗೆ ಕಳೆದ 8 ತಿಂಗಳಿಂದ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಜೆಡಿಎಸ್​ ಸಂಸದ ಕುಪೇಂದ್ರ ರೆಡ್ಡಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.

ಮೋದಿ, ಅಮಿತ್ ಷಾ ಕುಮ್ಮಕ್ಕು

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇವರು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಆ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಧ್ವಂಸಗೊಳಿಸುವ ಕೆಲಸ ನಡೆಯುತ್ತಿದೆ. ಜನಾದೇಶ ಇರುವ ಸರ್ಕಾರವನ್ನು ಅಸ್ಥಿರಗೊಳಿಸಿಸುವ ಪ್ರಯತ್ನ ಕರ್ನಾಟಕದಲ್ಲಿ ನಡೆಯುತ್ತಿದೆ. ಇದನ್ನು ತಡೆಯಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಸಂಸದ ವಿ. ಉಗ್ರಪ್ಪ ತಿಳಿಸಿದರು.

ಸುದ್ದಿಗೋಷ್ಠಿಗೆ ಅವಕಾಶ ನಿರಾಕರಣೆ

ರಾಜ್ಯದ ಕಾಂಗ್ರೆಸ್​ ಮತ್ತು ಜೆಡಿಎಸ್​ ಸಂಸದರು ಗುರುವಾರ ಬೆಳಗ್ಗೆ ಕರ್ನಾಟಕ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಕರ್ನಾಟಕ ಭವನದ ಆಯುಕ್ತ ನಿಲಯ್​ ಮಿಥಾಶ್​ ಅವರು ಇಲಾಖೆ ಪರೀಕ್ಷೆ ನಡೆಯುತ್ತಿದೆ ಎಂಬ ಕಾರಣ ನೀಡಿ ಸುದ್ದಿಗೋಷ್ಠಿಗೆ ಅವಕಾಶ ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಸಂಸದರು ಕರ್ನಾಟಕ ಭವನದ ಹೊರಭಾಗದಲ್ಲಿ ಸುದ್ದಿಗೋಷ್ಠಿ ನಡೆಸಿದರು.