ಕೈ ಮಿಂಚು, ಕಮಲ ಮಂಕು

ದೋಸ್ತಿ ಪಕ್ಷ ಜೆಡಿಎಸ್ ಜತೆಗಿನ ಕ್ಷೇತ್ರ ಹಂಚಿಕೆ, ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳ ಜತೆಗೆ ಪ್ರತ್ಯೇಕ ಧರ್ಮ ವಿಚಾರದಲ್ಲಿನ ಪಶ್ಚಾತ್ತಾಪ ಹೇಳಿಕೆಯ ಪರ-ವಿರೋಧದ ಜಿಜ್ಞಾಸೆಗಳ ತಾಪದಿಂದ ಬಿಸಿಯೇರಿದ್ದ ಕಾಂಗ್ರೆಸ್ ಕೊನೆಗೂ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮೈಕೊಡವಿದೆ. ಶನಿವಾರವಷ್ಟೇ ಜೆಡಿಎಸ್ ಜತೆ ಕೈಜೋಡಿಸಿ ಒಂದೇ ವೇದಿಕೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದ ಕಾಂಗ್ರೆಸ್ ನಾಯಕರು ಸೋಮವಾರ ಪ್ರಚಾರದ ಅಖಾಡಕ್ಕೆ ಧುಮಕುತ್ತಿದ್ದಾರೆ. ಇನ್ನೊಂದೆಡೆ ಉಪ ಸಮರವನ್ನು ಮುಂಬರುವ ಲೋಕಸಭಾ ಚುನಾವಣೆಯ ತಾಲೀಮಾಗಿ ಪರಿಗಣಿಸಿ ರಣಕಹಳೆ ಮೊಳಗಿಸಿದ್ದ ಬಿಜೆಪಿ ಶಿವಮೊಗ್ಗ, ಬಳ್ಳಾರಿ ಬಿಟ್ಟು ಉಳಿದೆಲ್ಲೆಡೆ ಮಂಕಾಗಿದೆ. ಬೆರಳೆಣಿಕೆ ನಾಯಕರನ್ನು ಬಿಟ್ಟರೆ ಉಳಿದವರೆಲ್ಲ ಕಣದಿಂದಲೇ ಕಾಣೆಯಾಗಿದ್ದಾರೆ.

ರಾಜ್ಯದ ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ನಿಣಾರ್ಯಕ ಎಂಬ ಉದ್ದೇಶದೊಂದಿಗೆ ಉಪ ಸಮರ ಗೆದ್ದೇ ತೀರುವ ಪಣತೊಟ್ಟಿರುವ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸೋಮವಾರ ಕದನ ಕಣಕ್ಕೆ ಅಧಿಕೃತವಾಗಿ ಕಾಲಿಡುತ್ತಿದ್ದಾರೆ.

ಉಪಚುನಾ ವಣೆಯ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಗೆ ಶನಿವಾರ ತೆರೆಬಿದ್ದರೂ ಪೂರ್ಣ ಪ್ರಮಾಣದ ಪ್ರಚಾರ ಭರಾಟೆಗೆ ಸೋಮವಾರವಷ್ಟೇ ಚಾಲನೆ ಸಿಗಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಜಮಖಂಡಿ ಫೋಕಸ್: ಜಮಖಂಡಿ ವಿಧಾನಸಭೆ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲು ಬಯಸಿರುವ ಕಾಂಗ್ರೆಸ್, 44 ವೀಕ್ಷಕರನ್ನು ನೇಮಿಸಿ ಬಾಗಲಕೋಟೆಯಲ್ಲಿ ವಿಶೇಷ ಸಭೆಯನ್ನೂ ಆಯೋಜಿಸಿದೆ.

ಎಐಸಿಸಿ ವತಿಯಿಂದಲೂ ಎಲ್ಲ ಕ್ಷೇತ್ರಗಳಿಗೆ ಪ್ರತ್ಯೇಕ ವೀಕ್ಷಕರನ್ನು ನೇಮಿಸಲಾಗಿದೆ. ಮೈತ್ರಿ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಂಕಲ್ಪಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಸೇರಿ ಎರಡೂ ಪಕ್ಷದ ಘಟಾನುಘಟಿಗಳು ಜಂಟಿ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ. ಅ.30ಕ್ಕೆ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಮೈತ್ರಿಯಿಂದ ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲ, ಸ್ಥಳೀಯವಾಗಿಯೂ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿದರೆ 2019ಕ್ಕೆ ಮೈತ್ರಿ ಸುಲಭ ಎಂಬ ನಿಟ್ಟಿನಲ್ಲಿ ಈ ಎಲ್ಲ ಪ್ರಯತ್ನಗಳು ಆರಂಭವಾಗಿವೆ.

ಜಮಖಂಡಿಗೇಕೆ ಮಹತ್ವ

ಜಮಖಂಡಿ ಕಾಂಗ್ರೆಸ್ ಕೈನಲ್ಲಿರುವ ಕ್ಷೇತ್ರವಾದ್ದರಿಂದ ಉಪಚುನಾವಣೆ ಫಲಿತಾಂಶ ಪಕ್ಷದ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಉಂಟು ಮಾಡಬಹುದೆಂಬುದು ಕಾಂಗ್ರೆಸ್​ನ ಲೆಕ್ಕಾಚಾರ. ಈ ಒಂದು ಕ್ಷೇತ್ರ ಸೋತರೂ ಕಾಂಗ್ರೆಸ್ ಬಲ ಕುಗ್ಗುವುದಲ್ಲದೆ, ಬಿಜೆಪಿಯ ಬಲ ಹೆಚ್ಚಾಗಲಿದೆ. ಹೀಗಾಗಿ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವುದು ಅತ್ಯಂತ ಅವಶ್ಯಕವಾದ್ದರಿಂದ ಸಭೆಗೆ ಹಾಜರಾಗಿ ಎಂದು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬಳ್ಳಾರಿ ಪ್ರತಿಷ್ಠೆಯ ಕಣ

ಬಳ್ಳಾರಿಯನ್ನು ವಿಶೇಷ ಆದ್ಯತೆ ಮೇಲೆ ಕಾಂಗ್ರೆಸ್ ಪರಿಗಣಿಸಿದೆ. ಆ ಪಕ್ಷದ ನಾಯಕರ ಪ್ರವಾಸ ವಿವರಗಳೇ ಇದನ್ನು ಸಾಕ್ಷೀಕರಿಸುತ್ತವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅ.22ರಿಂದ ನ.1ರವರೆಗಿನ 11 ದಿನದ ಪ್ರವಾಸದಲ್ಲಿ 6 ದಿನ ಬಳ್ಳಾರಿಗೇ ಮೀಸಲಿಟ್ಟಿದ್ದಾರೆ. ಸಿದ್ದರಾಮಯ್ಯ ಮಂಡ್ಯ ಹಾಗೂ ಶಿವಮೊಗ್ಗಕ್ಕೆ ತಲಾ ಒಂದು ದಿನ ಮೀಸಲಿಟ್ಟರೆ ಬಳ್ಳಾರಿಯಲ್ಲಿ ನಾಲ್ಕು ದಿನ ಪ್ರವಾಸ ಮಾಡಲಿದ್ದಾರೆ. ಇತರ ಅನೇಕ ನಾಯಕರ ಪ್ರವಾಸ ಯೋಜನೆಗಳಲ್ಲೂ ಬಳ್ಳಾರಿಗೆ ಪ್ರಾಮುಖ್ಯತೆ ನೀಡಿ ಯೋಜನೆ ಮಾಡಲಾಗಿದೆ.

ಯಾರ್ಯಾರು ಎಲ್ಲೆಲ್ಲಿ ಪ್ರಚಾರ?

ದಿನೇಶ್ ಗುಂಡೂರಾವ್ ಸೋಮವಾರದಿಂದ 31ರವರೆಗೂ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭೆ ಉಪಚುನಾವಣೆ ಕುರಿತಂತೆ ಸಭೆಗಳು, ಸುದ್ದಿಗೋಷ್ಠಿ, ಸಮಾವೇಶ ನಡೆಸಲಿದ್ದಾರೆ. ಪರಮೇಶ್ವರ್ ಸೋಮವಾರ ಹಾಗೂ ಮಂಗಳವಾರ ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದರೆ, ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರದಿಂದ ಅ.31ರವರೆಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದು ಅಥವಾ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ.

ಬಿಜೆಪಿ ಸೀಮಿತ ಉತ್ಸಾಹ!

ಬೆಂಗಳೂರು: ‘ಮೈತ್ರಿ ಸರ್ಕಾರದ ನಡೆಯಿಂದ ಜನ ಬೇಸತ್ತಿದ್ದಾರೆ, ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ’ ಎಂಬ ಹೇಳಿಕೆಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳುತ್ತಿರುವ ಬಿಜೆಪಿಯಲ್ಲಿ ಚುನಾವಣೆ ಗೆಲ್ಲುವ ಗಂಭೀರ ಪ್ರಯತ್ನಗಳೇ ನಡೆಯುತ್ತಿಲ್ಲ ಎಂಬ ಅಭಿಪ್ರಾಯ, ಅಸಮಾಧಾನ ಕಾರ್ಯಕರ್ತರ ವಲಯದಲ್ಲಿ ಟಿಸಿಲೊಡೆಯುತ್ತಿದೆ. ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು, ಕೆಲ ಕ್ಷೇತ್ರಗಳಲ್ಲಿ ಸಿ.ಟಿ. ರವಿ ಪ್ರವಾಸ ಮಾಡುತ್ತಿದ್ದಾರೆ. ಸ್ವಂತ ಕ್ಷೇತ್ರದಲ್ಲಿ ತೊಂದರೆ ಆಗಬಾರದು ಎಂಬ ಎಚ್ಚರಿಕೆಯಲ್ಲಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಜಮಖಂಡಿ ಉಸ್ತುವಾರಿ ಹೊತ್ತ ಜಗದೀಶ ಶೆಟ್ಟರ್ ವಿದೇಶಕ್ಕೆ ಹಾರಿದ್ದಾರೆ.

ಕೆ.ಎಸ್. ಈಶ್ವರಪ್ಪ ಸಹ ಶಿವಮೊಗ್ಗಕ್ಕೇ ಸೀಮಿತರಾಗಿದ್ದಾರೆ. ಬಳ್ಳಾರಿಯಲ್ಲಿ ಹೆಚ್ಚಿನ ಕಾಂಗ್ರೆಸ್ ಶಾಸಕರಿರುವ ಕಾರಣ ಕ್ಷೇತ್ರವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಶ್ರೀರಾಮುಲು ಅಲ್ಲೇ ನೆಲೆಯೂರಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸೇರಿ ಅನೇಕ ಪದಾಧಿಕಾರಿಗಳು ಬಳ್ಳಾರಿಯಲ್ಲೇ ಇದ್ದಾರೆ. ಬಳ್ಳಾರಿ ಉಸ್ತುವಾರಿಗಳಲ್ಲೊಬ್ಬರಾದ ಸಿ.ಟಿ. ರವಿ ಬಳ್ಳಾರಿ ಜತೆಗೆ ಜಮಖಂಡಿ, ಶಿವಮೊಗ್ಗ, ಮಂಡ್ಯ, ರಾಮನಗರ ಪ್ರವಾಸ ನಡೆಸುತ್ತಿದ್ದಾರೆ.

ಲೋಕಸಭೆ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದನ್ನು ಬಿಟ್ಟರೆ ಹೊಸ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಯಾವುದೇ ಉತ್ಸಾಹ, ಸಂಘಟಿತ ಪ್ರಯತ್ನ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ನಾಮುಂದು, ತಾಮುಂದು ಎನ್ನುತ್ತ ಸಚಿವ ಸ್ಥಾನಕ್ಕೆ ಹಪಹಪಿಸುವ ನಾಯಕರುಗಳು ಪ್ರಮುಖ ಪರೀಕ್ಷೆಯ ಸಮಯದಲ್ಲಿ ತಂಡವಾಗಿ ಕೆಲಸ ಮಾಡದೆ ಕೆಲವರಿಗಷ್ಠೇ ಚುನಾವಣೆ ಸೀಮಿತ ಎಂದು ನಡೆಯುತ್ತಿರುವ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಶೆಟ್ಟರ್ ಯೂರೋಪ್ ಪ್ರವಾಸ

ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದ ಬಿಜೆಪಿ ಪ್ರತಿ ಕ್ಷೇತ್ರಕ್ಕೂ 6-7 ರಾಜ್ಯ ಪದಾಧಿಕಾರಿಗಳ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು. ಪ್ರಯತ್ನ ಪಟ್ಟರೆ ಬಿಜೆಪಿ ಗೆಲ್ಲುವ ಎಲ್ಲ ಅವಕಾಶಗಳೂ ಇರುವ ಜಮಖಂಡಿ ಕ್ಷೇತ್ರಕ್ಕೆ ಮಾಜಿ ಸಿಎಂ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಾಯಕರೂ ಆದ ಜಗದೀಶ ಶೆಟ್ಟರ್ ನೇತೃತ್ವದಲ್ಲಿ 6 ನಾಯಕರ ತಂಡವನ್ನು ರಚಿಸಲಾಗಿತ್ತು. ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಪಿ.ಸಿ. ಗದ್ದೀಗೌಡರ್ ಹಾಗೂ ಡಾ. ಪ್ರಭಾಕರ ಕೋರೆ ಅವರು ತಂಡದಲ್ಲಿದ್ದಾರೆ. ಆದರೆ, ಕ್ಷೇತ್ರದಲ್ಲಿರಬೇಕಾದ ಉಸ್ತುವಾರಿ ಜಗದೀಶ ಶೆಟ್ಟರ್ ಅ.12ಕ್ಕೆ ಕುಟುಂಬಸಮೇತ ಯೂರೋಪ್ ಪ್ರವಾಸಕ್ಕೆ ತೆರಳಿದ್ದು, 29ಕ್ಕೆ ವಾಪಸಾಗಲಿದ್ದಾರೆ. ಆ ವೇಳೆಗೆ ಚುನಾವಣೆ ತಂತ್ರಗಾರಿಕೆ, ಪ್ರಚಾರ, ಸಂಘಟನೆಯ ಬಹುತೇಕ ಕಾರ್ಯಗಳು ಮುಕ್ತಾಯದ ಹಂತಕ್ಕೆ ಬಂದಿರುತ್ತವೆ. ಕಳೆದ ಚುನಾವಣೆಯಲ್ಲಿ ಇದ್ದ ಭಿನ್ನಮತವನ್ನು ಹೋಗಲಾಡಿಸಲು ಸಂಗಮೇಶ ನಿರಾಣಿ ಅಮಾನತು ಆದೇಶ ವಾಪಸ್ ಸೇರಿ ಅನೇಕ ಪ್ರಯತ್ನಗಳನ್ನು ಪಕ್ಷ ನಡೆಸುತ್ತಿದ್ದರೂ ಇತ್ತ ಪ್ರಮುಖ ನಾಯಕರೇ ಕಣದಿಂದ ದೂರ ತೆರಳಿರುವುದು ಚರ್ಚೆಗೆ ಗ್ರಾಸವಾಗಿದೆ.