More

    ಕಾಂಗ್ರೆಸ್ ಮೋದಿ ಹೇಳಿಕೆ ತಿರುಚುತ್ತಿದೆ: ಕೋಟ

    ಉಡುಪಿ: ಪ್ರತಿಯೊಬ್ಬರಿಗೂ ಗ್ಯಾರೆಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂಬ ಆಶ್ವಾಸನೆಯನ್ನು ಕಾಂಗ್ರೆಸ್ ಈಡೇರಿಸಬೇಕು. ಅದನ್ನು ಹೊರತುಪಡಿಸಿ ಪ್ರಧಾನಿ ಮೋದಿಯವರು 15 ಲಕ್ಷ ರೂ. ಹಣ ಜನರ ಖಾತೆಗೆ ಹಾಕಲಿ ಎಂಬುದಾಗಿ ಪ್ರಧಾನಿ ಹೇಳಿಕೆಯನ್ನು ತಿರುಚಿ ಬಿಜೆಪಿಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಭಾಷಣದಲ್ಲಿ ಪ್ರಧಾನಿ ಮೋದಿ 15 ಲಕ್ಷ ರೂ. ಕೊಡುತ್ತೇವೆ ಎಂದು ಎಲ್ಲೂ ಆಶ್ವಾಸನೆ ನೀಡಿಲ್ಲ, ವಿದೇಶದಲ್ಲಿ ಜಮೆಯಾಗಿರುವ ಕಪ್ಪು ಹಣ ಬಂದರೆ ಬಡವರಿಗೆ 15 ರಿಂದ 20 ಲಕ್ಷ ಕೊಡಬಹುದು. ಅಷ್ಟು ದುಡ್ಡು ಹೊರದೇಶದಲ್ಲಿದೆ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಈ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ. ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಉತ್ತರ ಕೊಡಬೇಕಾಗಿರೋದು ಸರ್ಕಾರದ ಜವಾಬ್ದಾರಿ. ಅನುಷ್ಠಾನ ಮಾಡಲು ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ಜನತೆ ಮುಂದೆ ಹೇಳಬೇಕು ಎಂದು ಆಗ್ರಹಿಸಿದರು.

    ಕೇಂದ್ರ 5 ಕೆಜಿ ಅಕ್ಕಿಯ ಜೊತೆ ಸಾಗಾಣಿಕ ವೆಚ್ಚವನ್ನು ಕೊಡುತ್ತಿದೆ. ಆಶ್ವಾಸನೆ ನೀಡುವಾಗ ಕೇಂದ್ರ 5 ಕೆ.ಜಿ ಕೊಡುತ್ತಿದೆ. ನಾವು 5 ಕೆಜಿ ಸೇರಿಸಿ ಕೊಡುತ್ತೇನೆ ಎಂದು ಹೇಳಬೇಕಿತ್ತು. ಕೊಟ್ಟ ಮಾತಿನಿಂದ ತಪ್ಪಿಸಿಕೊಂಡರೆ ಕಾಂಗ್ರೆಸ್‌ಗೆ ಶೋಭೆ ಬರಲ್ಲ. ಜೂನ್ ಒಂದರಿಂದ ವಿದ್ಯುತ್ ಬಿಲ್ ಕಟ್ಟುವುದು ಬೇಡ ಎಂದು ಡಿಕೆಶಿ ಹೇಳಿದ್ದಾರೆ. ಆ ಮಾತನ್ನು ಉಳಿಸಿಕೊಳ್ಳಬೇಕು. ಆಳುವ ಸರ್ಕಾರ ಮಾತು ತಪ್ಪಿದರೆ ವಿಪಕ್ಷ ಎಚ್ಚರಿಸುವ ಕೆಲಸ ಮಾಡುತ್ತದೆ ಎಂದರು.

    ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಸರ್ಕಾರ ತೀರ್ಮಾನ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕೆಲವು ಕಾಂಗ್ರೆಸ್ ಬೆಂಬಲಿತ ಬುದ್ಧಿಜೀವಿಗಳ ವಿಚಾರ ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಟೌನ್‌ಹಾಲ್ ಮುಂದೆ ಗೋಭಕ್ಷಣೆ ಮಾಡಿ ಗೋಪೂಜೆ ಮಾಡುವವರಿಗೆ ಸಡ್ಡುಹೊಡೆದ ಮಾನಸಿಕತೆ ಹೊಂದಿರುವವರ ಮಾತು ಕೇಳಿದರೆ ಸರ್ಕಾರ ಸಮಸ್ಯೆ ಸೃಷ್ಟಿ ಮಾಡಿಕೊಳ್ಳಬಾರದು ಎಂದರು.

    ಗೋವು ಸಂರಕ್ಷಣೆ, ಮತಾಂತರ, ಪಠ್ಯಪುಸ್ತಕ, ಟಿಪ್ಪು ವಿಚಾರದಲ್ಲಿ ಬಿಜೆಪಿಯೂ ಸ್ಪಷ್ಟ ಜನಾಭಿಪ್ರಾಯ ರೂಪಿಸಿ ವಿರೋಧಿಸುತ್ತದೆ. ಪಠ್ಯಕ್ರಮದ ವಿಚಾರದಲ್ಲಿ ಅಂದು ಚರ್ಚೆಯಾಗಿ ಕೆಲವು ಬದಲಾವಣೆಗಳು ಆಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts