ಗೊಂದಲ ಉಚಿತ, ಕುತೂಹಲ ಜೀವಂತ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಪುಕಾರು ನಡುವೆಯೇ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿದ್ದು, ಪ್ರತಿಪಕ್ಷ ಬಿಜೆಪಿ ತೆರೆಮರೆಯಲ್ಲೇ ಕೈ ಶಾಸಕರನ್ನು ಸೆಳೆಯುವ ಯತ್ನ ಮುಂದುವರಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರವೂ ಡಾಲರ್ಸ್ ಕಾಲನಿ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಸಭೆ ನಡೆಸಿ, ಕೆಲವೇ ದಿನಗಳಲ್ಲಿ ಎದುರಾಗಬಹುದಾದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಇಡೀ ಅಸ್ಥಿರತೆಯ ಕೇಂದ್ರಬಿಂದು ಜಾರಕಿಹೊಳಿ ಸಹೋದರರು ಕಾಂಗ್ರೆಸ್ ತ್ಯಜಿಸುವುದಿಲ್ಲ ಎಂಬ ಹೇಳಿಕೆ ನಡುವೆಯೂ ನಿಗೂಢ ನಡೆಯನ್ನು ಮುಂದುವರಿಸಿದ್ದಾರೆ.

ಕುತೂಹಲ ಜೀವಂತ: ಏತನ್ಮಧ್ಯೆ ಶಾಸಕ ಸತೀಶ್ ಜಾರಕಿಹೊಳಿ, ಸಚಿವ ಡಿ.ಕೆ.ಶಿವಕುಮಾರ್ ಜತೆಗಿನ ವೈಮನಸ್ಸು ಇರುವುದು ನಿಜ ಎಂದು ಹೇಳುತ್ತಲೇ ಪಕ್ಷ ಬಿಡುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಮತ್ತೊಬ್ಬ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಸಭೆ ನಡೆಸಿ, ಕೆಲ ವಿಷಯಗಳನ್ನು ರ್ಚಚಿಸಲಾಗುವುದು ಎಂದು ಹೇಳಿ ಕುತೂಹಲ ಜೀವಂತವಾಗಿರುವಂತೆ ನೋಡಿಕೊಂಡರು.

ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಸಮಾನ ಮನಸ್ಕ ಶಾಸಕರೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಅಸಮಾಧಾನ ಇರುವುದು ನಿಜ, ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶದಿಂದ ವಾಪಸಾದ ಬಳಿಕ ರ್ಚಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಆಂತರಿಕ ಬೇಗುದಿ ಶಮನಗೊಂಡಿಲ್ಲ ಎಂಬ ಸಂದೇಶ ನೀಡಿದರು.

ಖರ್ಗೆ ನನಗೆ ತಂದೆ ಸಮಾನ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ನಾಯಕರು. ನಾವು ಯಾವಾಗಲೂ ಅಹಿಂದದಲ್ಲೇ ಗುರುತಿಸಿಕೊಂಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ನನಗೆ ತಂದೆ ಸಮಾನ. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗ್ಗೆ ಸಪ್ತ ಸಚಿವರ ಸರ್ಕಾರಿ ನಿವಾಸದಲ್ಲಿ ಆಪ್ತರ ಜತೆಗಿನ ಸಭೆ ನಡೆಸಿದ ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಕೆಲ ವಿಚಾರಗಳಲ್ಲಿ ಅಸಮಾಧಾನ ಇತ್ತು. ಈಗ ಎಲ್ಲವೂ ಬಗೆಹರಿದಿದೆ. ಮಾಧ್ಯಮಗಳು ಬೆನ್ನು ಬೀಳುವುದನ್ನು ಬಿಟ್ಟರೆ ಎಲ್ಲವೂ ಇಲ್ಲಿಗೇ ನಿಂತು ಹೋಗಲಿದೆ ಎಂದರು. ಇದರ ಬೆನ್ನಲ್ಲೇ ಖರ್ಗೆ ಭೇಟಿಗೆ ತೆರಳುತ್ತಿದ್ದೇನೆ ಎಂದು ರಮೇಶ್, ಸರ್ಕಾರಿ ಭದ್ರತೆ ತೊರೆದು ಖಾಸಗಿ ವಾಹನದಲ್ಲಿ ತೆರಳಿದರಾದರೂ ಖರ್ಗೆ ಭೇಟಿ ಮಾಡಿಲ್ಲ. ಹೀಗಾಗಿ ಜಾರಕಿಹೊಳಿ ಸಹೋದರರ ನಡೆ ನಿಗೂಢವಾಗಿಯೇ ಉಳಿದಿದೆ.

ಬಳ್ಳಾರಿ ಶಾಸಕರ ಬದ್ಧತೆ ಪ್ರದರ್ಶನ

ಬಳ್ಳಾರಿ ಜಿಲ್ಲೆಯ ಮೂವರು ಸೇರಿ 17ಕ್ಕೂ ಹೆಚ್ಚು ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂಬ ವದಂತಿ ನಡುವೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆ ಭಾಗದ ಶಾಸಕರನ್ನು ಕೆಪಿಸಿಸಿ ಕಚೇರಿಗೆ ಕರೆಸಿ, ಮಾತುಕತೆ ನಡೆಸಿದರು. ವಿಜಯನಗರ ಶಾಸಕ ಆನಂದ್ ಸಿಂಗ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹಾಗೂ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ದಿನೇಶ್ ಜತೆ ರ್ಚಚಿಸಿದರು. ಬಳಿಕ ಮಾತನಾಡಿದ ಗುಂಡೂರಾವ್, ಬಿಜೆಪಿ ನಾಯಕರು ಅನೈತಿಕ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ಶಾಸಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸಕರೂ ಸೇರಿ ಎಲ್ಲರೂ ಪಕ್ಷಕ್ಕೆ ಬದ್ಧರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಬೇಕು ಎಂಬ ಬಿಜೆಪಿ ಉದ್ದೇಶ ಈಡೇರುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಹಗಲುಗನಸು ಕಾಣುತ್ತಿದೆ

ಬೆಂಗಳೂರು: ಕುತೂಹಲಕರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ನ ಲೋಕಸಭಾ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹಠಾತ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೇರುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಅವರ ಕಸನು ಈಡೇರುವುದಿಲ್ಲ. ಜಾರಕಿಹೊಳಿ ಸಹೋದರರು ದಶಕಗಳಿಂದ ಪಕ್ಷದೊಂದಿಗೆ ತೊಡಗಿಸಿಕೊಂಡಿದ್ದಾರೆ. ಅಸಮಾಧಾನಗಳು ಬರುವುದು ಸಹಜ. ಅದರ ಬಗೆಗೆ ಮಾಹಿತಿ ಪಡೆಯುತ್ತಿದ್ದೇನೆ. ಅವರೊಂದಿಗೆ ಮಾತನಾಡುತ್ತೇನೆ. ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಮೈತ್ರಿ ಸರ್ಕಾರ ಉಳಿಯೋಕೂ ಉರುಳೋಕೂ ಸಿದ್ದು ಬರ್ಬೇಕು!

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಸರ್ಕಾರ ಉರುಳುತ್ತಾ? ಉಳಿಯುತ್ತಾ? ಎಂಬುದು ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ವಾಪಸಾದ ಮೇಲೆಯೇ ನಿರ್ಧಾರ. ಹೀಗೊಂದು ಮಾತು ಮೂರೂ ರಾಜಕೀಯ ಪಕ್ಷಗಳ ಮೊಗಸಾಲೆಯಿಂದ ಹೊರ ಬೀಳುತ್ತಿದೆ. ಸಿದ್ದರಾಮಯ್ಯ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೇ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂಬ ಮಾಹಿತಿ ಸಿಎಂ ಕುಮಾರಸ್ವಾಮಿಗೂ ಇತ್ತು ಎಂಬುದೀಗ ಗುಟ್ಟಾಗಿ ಉಳಿದಿಲ್ಲ. ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಭಿನ್ನಾಭಿಪ್ರಾಯ ನೆಪವಿಟ್ಟುಕೊಂಡು ಬಂಡೆದ್ದಿರುವ ಜಾರಕಿಹೊಳಿ ಸಹೋದರರು, ಚಿಕ್ಕಬಳ್ಳಾಪುರ ಜಿಲ್ಲಾ ಆಂತರಿಕ ರಾಜಕಾರಣದ ವಿಚಾರ ಮುಂದಿಟ್ಟು ಅಸಮಾಧಾನ ಕಾರುತ್ತಿರುವ ಡಾ.ಸುಧಾಕರ್ ನೇತೃತ್ವದ ತಂಡ, ಬಳ್ಳಾರಿಯ ಬಿ.ನಾಗೇಂದ್ರ ಹಾಗೂ ಆನಂದ್​ಸಿಂಗ್ ತಂಡ ಹೀಗೆ ಬಿಡಿಬಿಡಿಯಾಗಿ ಅತೃಪ್ತಿ ಹೊರಹಾಕುತ್ತಿರುವ ಎಲ್ಲ ಶಾಸಕರು ಸಿದ್ದರಾಮಯ್ಯ ಬಂದ್ಮೇಲೇ ಮುಂದಿನ ನಡೆ ಪ್ರಕಟಿಸುತ್ತೇವೆ ಎಂಬ ಧಾಟಿಯಲ್ಲೇ ಮಾತನಾಡುತ್ತಿದ್ದಾರೆ. ಅತ್ತ ಸರ್ಕಾರ ಪತನದ ಭೀತಿಯಲ್ಲಿರುವ ಕುಮಾರಸ್ವಾಮಿ ಒಳಗೊಂಡ ಜೆಡಿಎಸ್ ಸಚಿವರು, ಶಾಸಕರು ಸಿದ್ದರಾಮಯ್ಯ ಬಂದಮೇಲೆ ಕಾಂಗ್ರೆಸ್ ಒಳಜಗಳ ಕೊನೆಗೊಳ್ಳಲಿದೆ ಎನ್ನುತ್ತಿದ್ದಾರೆ. ಇನ್ನು ಸರ್ಕಾರ ಪತನವನ್ನು ತೆರೆದಗಣ್ಣಿನಿಂದ ನಿರೀಕ್ಷಿಸುತ್ತಿರುವ ಬಿಜೆಪಿ ಕೂಡ ಮಾಜಿ ಸಿಎಂ ಆಗಮನ ಬಳಿಕ ಅಸಮಾಧಾನ ಸ್ಪೋಟಗೊಳ್ಳಲಿದೆ ಎಂದೇ ಕಾಯುತ್ತಿದೆ. ಅಷ್ಟೇ ಅಲ್ಲ, ಅಸಮಾಧಾನ ಶಮನಕ್ಕೆ ಸಿದ್ದರಾಮಯ್ಯ ಎಷ್ಟು ಆಸಕ್ತಿ ವಹಿಸುವರು ಎಂಬ ಕುತೂಹಲವೂ ಬಿಜೆಪಿಗಿದೆ.

ಜೆಡಿಎಸ್ ಸಂಪರ್ಕದಲ್ಲಿ ಬಿಜೆಪಿಯ 10 ಶಾಸಕರು

ಮೈಸೂರು: ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಸಹ 20 ವರ್ಷ ಬಿಜೆಪಿಯಲ್ಲಿದ್ದವನು. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಮುಖಂಡರು ಅಧಿಕಾರ ಪಡೆಯಲು ಕೆಲ ಶಾಸಕರಿಗೆ ಇಲ್ಲ ಸಲ್ಲದ ಆಮಿಷವೊಡ್ಡಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡá-ವುದಿಲ್ಲ ಎಂದರು.

ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ, ಅವರ ವಿಕೆಟ್​ಗಳು ಒಂದೊಂದಾಗಿ ಉರುಳಿ ಬೀಳುತ್ತವೆ.

| ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಬಿಜೆಪಿ ಶಾಸಕರೆಲ್ಲ ಒಗ್ಗಟ್ಟಿನಿಂದಿದ್ದಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟೇ ಪ್ರಯತ್ನ ಮಾಡಿದರೂ ಒಬ್ಬರನ್ನೂ ಸೆಳೆಯಲು ಸಾಧ್ಯವಿಲ್ಲ. ಆಪರೇಷನ್ ಕಮಲ ಮಾಡಲು ನಾವು ಯತ್ನಿಸುತ್ತಿಲ್ಲ.

| ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ