ಕೊಲೆ ಯತ್ನ ಕೇಸ್, ಗಣೇಶ್​ಗೆ ಸಂಕಷ್ಟ

ಬೆಂಗಳೂರು/ರಾಮನಗರ: ಈಗಲ್ಟನ್ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕರ ಮಾರಾಮಾರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಪಕ್ಷ ಗಣೇಶ್​ರನ್ನು ಅಮಾನತು ಮಾಡಿದ್ದು, ಪಕ್ಷದಿಂದ ಆಂತರಿಕ ತನಿಖೆ ಕೈಗೊಳ್ಳಲು ಡಿಸಿಎಂ ನೇತೃತ್ವದ ಸಮಿತಿ ರಚಿಸಿದೆ.

ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 323 (ಸ್ವಯಂ ಪ್ರೇರಣೆಯಿಂದ ಹಲ್ಲೆ), 324 (ಮಾರಕಾಸ್ತ್ರದಿಂದ ಸ್ವಯಂ ಪ್ರೇರಿತ ಹಲ್ಲೆ), 504 (ಉದ್ದೇಶ ಪೂರ್ವಕವಾಗಿ ನಿಂದನೆ), 506ರ (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಸಂಪೂರ್ಣ ಮಾಹಿತಿಯನ್ನು ಆನಂದ್ ಸಿಂಗ್ ಶೇಷಾದ್ರಿಪುರ ಪೊಲೀಸರಿಗೆ ನೀಡಿದ್ದಾರೆ. ಇದರ ಆಧಾರದ ಮೇಲೆ ಬಿಡದಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?: ರೆರ್ಸಾಟ್​ನಲ್ಲಿ ಪಕ್ಷದ ಎಲ್ಲ ಮುಖಂಡರು, ಶಾಸಕರು ಲೋಕಸಭಾ ಚುನಾವಣೆ ತಯಾರಿ, ಪಕ್ಷ ಸಂಘಟನೆ ಕುರಿತು ಮಧ್ಯರಾತ್ರಿವರೆಗೂ ಚರ್ಚೆ ನಡೆಸುತ್ತಿದ್ದೆವು. ನಾನೂ ಸೇರಿ ಸಚಿವ ತುಕಾರಾಮ್ ಶಾಸಕರಾದ ರಘುಮೂರ್ತಿ, ತನ್ವೀರ್ ಸೇಠ್, ರಾಮಪ್ಪ ಇತರರು ಕೊಠಡಿಗಳಿಗೆ ತೆರಳುತ್ತಿದ್ದೆವು. ನನ್ನ ಕೊಠಡಿ ಸಂಖ್ಯೆ 207ರ ಮುಂಭಾಗ ತೆರಳುತ್ತಿದ್ದಾಗ ಶಾಸಕ ಜೆ.ಎನ್.ಗಣೇಶ್ ಏಕಾಏಕಿ ಹಲ್ಲೆ ನಡೆಸಿದರು. ‘ಪಕ್ಷದಲ್ಲಿ ನನ್ನ ಬಗ್ಗೆ ದೂರು ನೀಡುತ್ತೀಯಾ? ಮುಖಂಡರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತೀಯಾ?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮುಖಕ್ಕೆ ಗುದ್ದಿ, ಗೋಡೆಗೆ ತಲೆಯನ್ನು ಗುದ್ದಿಸಿ, ‘ಎಲ್ಲಿ ನನ್ನ ಬಂದೂಕು, ಇವನು ನನ್ನನ್ನು ರಾಜಕೀಯವಾಗಿ ಮುಗಿಸುತ್ತಿದ್ದಾನೆ. ಇವನ ಜೀವನವನ್ನೇ ನಾನೀಗ ಮುಗಿಸುತ್ತೇನೆ’ ಎಂದು ಬಂದೂಕು ಸಿಗದಿದ್ದಾಗ ನನ್ನ ಎದೆ ಭಾಗ, ಕಿಬ್ಬೊಟ್ಟೆಗೆ ಕಾಲಿನಿಂದ ಒದ್ದರು. ನಾನು ಈ ರೀತಿ ವರ್ತಿಸದಂತೆ ತಿಳಿ ಹೇಳಿದರೂ ಕೇಳದೆ, ರೆಸಾರ್ಟ್ ನಲ್ಲಿದ್ದ ಹೂಕುಂಡವನ್ನು ನನ್ನ ತಲೆ ಮೇಲೆ ಎಸೆದರು. ಆಗ ನಾನು ಪ್ರಜ್ಞೆ ಕಳೆದುಕೊಂಡೆ ಎಂದು ಆನಂದ್ ಸಿಂಗ್ ದೂರಿನಲ್ಲಿ ವಿವರಿಸಿದ್ದಾರೆ.

ರಕ್ಷಣೆಗೆ ಮೊರೆ: ಕೊಲೆ ಮಾಡುವ ಉದ್ದೇಶದಿಂದಲೇ ಗಣೇಶ್ ದಾಳಿ ನಡೆಸಿದ್ದು, ನನಗೆ ಜೀವ ಬೆದರಿಕೆಯಿದ್ದು ನನಗೂ, ನನ್ನ ಕುಟುಂಬಕ್ಕೂ ರಕ್ಷಣೆ ನೀಡುವಂತೆ ಪೊಲೀಸರ ಬಳಿ ಆನಂದ್ ಸಿಂಗ್ ಕೋರಿಕೊಂಡಿದ್ದಾರೆ.

ಗಣೇಶ್ ಕ್ಷಮೆಯಾಚನೆ: ನಾನು ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸೋಮವಾರ ಸಮರ್ಥನೆ ಮಾಡಿಕೊಂಡಿದ್ದ ಗಣೇಶ್, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದದ್ದು ನಿಜ. ಈ ವೇಳೆ ನಾನು ಕೈ ಮಾಡಲಿಲ್ಲ. ಅವರೇ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡರು. ಅವರ ಮೇಲೆ ದಾಳಿ ನಡೆಸಲು ನನ್ನ ಗನ್​ವ್ಯಾನ್ ಬಳಿ ಗನ್ ಅನ್ನು ಕೇಳಿಲ್ಲ ಎಂದು ಹೇಳಿಕೆ ನೀಡಿದ್ದರು. ಬಳಿಕ ‘ಆನಂದ್ ನನ್ನ ಸ್ನೇಹಿತರಾಗಿದ್ದು ಕ್ಷಮೆ ಯಾಚಿಸು ವುದಾಗಿ’ ಹೇಳಿದರು. ಆದರೆ ಆನಂದ್ ಕುಟುಂಬದ ನಿರ್ಧಾರ, ಸಿದ್ದರಾಮಯ್ಯ ಸೂಚನೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಸಮಿತಿ

ಹಲ್ಲೆ ಪ್ರಕರಣ ವಿಚಾರವಾಗಿ ಪಕ್ಷದ ಆಂತರಿಕ ತನಿಖೆಗೆ ಕೆಪಿಸಿಸಿ ನಿರ್ಧರಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೆಪಿಸಿಸಿ, ರೆಸಾರ್ಟ್​ನಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ವರಿಷ್ಠರು ಪ್ರಾಥಮಿಕ ವಿಚಾರಣೆ ನಡೆಸಿ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಿದ್ದು, ಆನಂದ್ ಸಿಂಗ್ ಜತೆ ಮಾತನಾಡಿ ವಿವರ ಪಡೆದುಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶದ ಮೇರೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದಿದೆ. ಪ್ರಕರಣದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೆ.ಜೆ.ಜಾರ್ಜ್ ಹಾಗೂ ಕೃಷ್ಣ ಬೈರೇಗೌಡ ಅವರನ್ನೊಳಗೊಂಡಂತೆ ವಿಶೇಷ ತನಿಖಾ ಸಮಿತಿ ರಚಿಸಲಾಗಿದ್ದು, ಅತ್ಯಂತ ಶೀಘ್ರವಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದೆ.

ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರರಂತೆ ವರ್ತಿಸುತ್ತಿದ್ದಾರೆ. ನನಗೆ 371 ಜೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದರು. ಇದೀಗ ಕಾಂಗ್ರೆಸ್ ಶಾಸಕರು ಕುಡಿದು ಹೊಡೆದಾಡಿದ್ದು ಯಾವ ಸೆಕ್ಷನ್?

| ಬಿ.ಶ್ರೀರಾಮುಲು, ಶಾಸಕ

ಕೈ ಶಾಸಕರು ‘ಬಂಧ’ಮುಕ್ತ

ರಾಮನಗರ: ಕಾಂಗ್ರೆಸ್​ನ ರೆಸಾರ್ಟ್ ರಾಜಕೀಯವನ್ನು ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಸುದ್ದಿ ಅಂತ್ಯಗೊಳಿಸಿದೆ. ಸೋಮವಾರ ಮುಂಜಾನೆಯಿಂದಲೇ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ವಿಚಲಿತಗೊಂಡಿದ್ದ ಕಾಂಗ್ರೆಸ್ ವಲಯ, ಲಿಂಗೈಕ್ಯರಾದ ಸುದ್ದಿ ಲಭ್ಯವಾಗುತ್ತಿದ್ದಂತೆ ಶಾಸಕರನ್ನು ಬಂಧಮುಕ್ತಗೊಳಿಸಿತು.

ಬಿಜೆಪಿಯತ್ತ ವಾಲಲು ಸಿದ್ಧತೆ ನಡೆಸಿದ್ದ ಶಾಸಕರ ಮನವೊಲಿಕೆ ಪೂರ್ಣ ಪ್ರಮಾಣದಲ್ಲಿ ಸಫಲವಾಗದ ಅಳುಕಿನಲ್ಲೇ ಕೈ ನಾಯಕರು ಶಾಸಕರನ್ನು ರೆಸಾರ್ಟ್​ನಿಂದ ಕಳಿಸಿಕೊಟ್ಟರು. ಪ್ರತಿ ಶಾಸಕರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಬೇಡಿಕೆಗಳನ್ನು ಪೂರೈಸಬೇಕೆಂಬ ಪ್ಲಾ್ಯನ್ ಕೂಡ ಸಾಧ್ಯವಾಗಿಲ್ಲ.

ಒಬ್ಬೊಬ್ಬರೇ ಜಾಗ ಖಾಲಿ: 60ಕ್ಕೂ ಹೆಚ್ಚು ಶಾಸಕರು ಬಿಡದಿಯ ಈಗಲ್ಟನ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ರಸ್ತೆ ಮಾರ್ಗದ ಮೂಲಕ ರೆಸಾರ್ಟ್​ಗೆ ಆಗಮಿಸಿದ್ದ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಶಾಸಕರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿ, ಬಿಜೆಪಿಯತ್ತ ಮುಖ ಮಾಡದಂತೆ ಸೂಚನೆ ನೀಡಿದರು. ಒಬ್ಬೊಬ್ಬ ಶಾಸಕರೇ ರೆಸಾರ್ಟ್​ನಿಂದ ಹೊರಬರಲು ಆರಂಭಿಸಿದರು. ದೂರದ ಊರುಗಳಿಗೆ ಪ್ರಯಾಣ ಬೆಳಸಬೇಕಿದ್ದ ಕೆಲ ಶಾಸಕರು ಸಾಯಂಕಾಲ 4 ಗಂಟೆ ನಂತರ ತೆರಳಿದರು.

ಸಭೆ ರದ್ದು: ಸೋಮವಾರ ಶಾಸಕರೊಂದಿಗೆ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆ ಸಭೆ ರದ್ದಾಗಿದೆ.

ಉತ್ತರ ಬಂದ ನಂತರ ಕ್ರಮ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಎಲ್ಲ ಶಾಸಕರನ್ನು ಅವರ ಕ್ಷೇತ್ರಗಳಿಗೆ ವಾಪಾಸ್ ಕಳುಹಿಸಿದ್ದು, ಬರ ನಿರ್ವಹಣೆ ಕುರಿತಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಹಿಂದಿನ ಸಿಎಲ್​ಪಿ ಸಭೆಗೆ ಹಾಜರಾಗದ ಶಾಸಕರಿಗೆ ನೋಟಿಸ್ ನೀಡಲಾಗಿದ್ದು, ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಕೆ ಬ್ರದರ್ಸ್ ಎಲ್ಲಿ?

ಸೋಮವಾರ ಎಲ್ಲ ಶಾಸಕರು ರೆಸಾರ್ಟ್​ನಿಂದ ಹೊರ ಬಂದರೂ ವಾಸ್ತವ್ಯದ ಉಸ್ತುವಾರಿ ಹೊತ್ತಿದ್ದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಹೊರಗೆ ಕಾಣಿಸಿಕೊಳ್ಳಲಿಲ್ಲ. ಮಧ್ಯಾಹ್ನದ ನಂತರ ಸಹೋದರರಿಬ್ಬರೂ ಬೆಂಬಲಿಗರೊಂದಿಗೆ ರೆಸಾರ್ಟ್ ತೊರೆದರು.