ರೆಸಾರ್ಟಲ್ಲಿ ಬಳ್ಳಾರಿ ಕುಸ್ತಿ

>

ಬೆಂಗಳೂರು/ರಾಮನಗರ: ರಾಜ್ಯ ರಾಜಕಾರಣದಲ್ಲಿನ ಮೇಲಾಟದ ಕಸರತ್ತು ಇದೀಗ ಕಾಂಗ್ರೆಸ್​ನಲ್ಲೇ ಹೊಯ್ಕೈ ಹಂತ ತಲುಪಿದೆ. ಬಿಜೆಪಿಯ ಆಪರೇಷನ್ ಕಮಲ ತಡೆಯುವುದಕ್ಕಾಗಿ ಈಗಲ್ಟನ್ ರೆಸಾರ್ಟ್ ಸೇರಿರುವ ಕಾಂಗ್ರೆಸ್ ಶಾಸಕರ ನಡುವೆಯೇ ಶನಿವಾರ ಮುಂಜಾನೆ ಮಾರಾಮಾರಿ ನಡೆದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅತೃಪ್ತರ ಬಂಡಾಯ, ಸರ್ಕಾರ ಪತನದ ಆತಂಕದಿಂದ ಇನ್ನೂ ಹೊರಬಾರದ ರಾಜ್ಯ ಕಾಂಗ್ರೆಸ್​ಗೆ ಇದರಿಂದ ಮತ್ತೊಂದು ಮುಜುಗರ ಎದುರಾಗಿದೆ.

ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಆನಂದ್ ಸಿಂಗ್ ಅವರ ಕಣ್ಣು, ಭುಜ, ಪಕ್ಕೆಲುಬಿಗೆ ಪೆಟ್ಟಾಗಿರುವುದಾಗಿ ತಿಳಿದು ಬಂದಿದೆ. ಭಾನುವಾರ ಸಂಜೆ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ಮತ್ತು ತಾಯಿ ಹೊಸಪೇಟೆಯಿಂದ ಆಸ್ಪತ್ರೆಗೆ ಆಗಮಿಸಿ ಮಗನ ಆರೋಗ್ಯ ವಿಚಾರಿಸಿದರು. ಮುಂಬೈನಲ್ಲಿದ್ದ ಪುತ್ರ ಕೂಡ ಸಂಜೆ ವೇಳೆ ಆಗಮಿಸಿದರು. ಇನ್ನೊಂದೆಡೆ ಕಾಂಗ್ರೆಸ್​ನ ವಿವಿಧ ನಾಯಕರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.

ಮಾರಾಮಾರಿ ವೇಳೆ ಆನಂದ್ ಸಿಂಗ್ ಮೇಲೆ ಬಾಟಲ್ ಒಡೆದು ಹಲ್ಲೆ ಮಾಡಲಾಗಿದೆ ಎಂಬ ಮಾತೂ ಕೇಳಿಬಂದಿದೆ. ಆದರೆ ಕಾಂಗ್ರೆಸ್ ನಾಯಕರು ಇದನ್ನು ಅಲ್ಲಗಳೆದಿದ್ದಾರೆ. ಆನಂದ್ ಸಿಂಗ್​ಗೆ ಒಳಹೊಡೆತದ ಗಾಯಗಳಾಗಿದ್ದು, ಸಿಟಿ ಸ್ಕಾ್ಯನಿಂಗ್, ಎಕ್ಸ್ರೇ ಮಾಡಲಾಗಿದೆ. ಎಲ್ಲವೂ ಸಾಮಾನ್ಯವಾಗಿದ್ದು, ನಿಗಾದಲ್ಲಿ ಇರಿಸುವ ಉದ್ದೇಶದಿಂದ ಪ್ರತ್ಯೇಕ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮದ್ಯರಾತ್ರಿ ಕುಸ್ತಿ

ಶನಿವಾರ ತಡರಾತ್ರಿ ರೆಸಾರ್ಟ್​ನಲ್ಲಿ ಶಾಸಕರು ಪಾರ್ಟಿಯಲ್ಲಿ ತೊಡಗಿದ್ದ ವೇಳೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ತಳ್ಳಾಟ ಆದಾಗ ಕಂಪ್ಲಿ ಶಾಸಕ ಗಣೇಶ್ ಮತ್ತು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್್ಕ ಆನಂದ್ ಸಿಂಗ್ ಮೇಲೆ ಮುಗಿಬಿದ್ದರೆಂದು ಹೇಳಲಾಗುತ್ತಿದೆ.

ಸ್ನೇಹಿತರು ಅಂದರೆ ಗಲಾಟೆ ಸಾಮಾನ್ಯ. ಹಾಗೇ ಸಣ್ಣ ಜಗಳ ನಡೆದಿದೆ ಅಷ್ಟೇ. ಆನಂದ್ ಸಿಂಗ್ ಆರಾಮಾಗಿದ್ದಾರೆ. ಇವತ್ತು ಬಿರಿಯಾನಿ ತರಿಸಿ ಊಟ ಮಾಡಿದ್ದಾರೆ.

| ಜಮೀರ್ ಅಹಮದ್, ಸಚಿವ

ರಾತ್ರಿ ನಾನು ರೆಸಾರ್ಟ್​ನಲ್ಲಿ ಇರಲಿಲ್ಲ. ಶನಿವಾರ ರಾತ್ರಿ ಸ್ವಲ್ಪ ಜಗಳ ಗಲಾಟೆ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಏನಾಗಿದೆ ಎನ್ನುವುದು ಅಲ್ಲಿಗೆ ಹೋದ ನಂತರವೇ ಗೊತ್ತಾಗಲಿದೆ.

| ಸಿದ್ದರಾಮಯ್ಯ, ಮಾಜಿ ಸಿಎಂ

ಸಿಎಂ ಬೇಸರ

‘ಶಾಸಕರಾಗಿ ಹೊಡೆದಾಡಿಕೊಳ್ಳೋದು ಅವಮಾನಕರ ಸಂಗತಿ. ಇದರಿಂದ ಬಿಜೆಪಿಗೆ ನಾವಾಗಿಯೇ ಅಸ್ತ್ರ ಕೊಟ್ಟಂತಾಗುತ್ತದೆ. ಇದಕ್ಕೆ ನಾನು ಹೊರಗಡೆ ಏನೆಂದು ಸಮಜಾಯಿಷಿ ನೀಡುವುದು?’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆಂದು ಗೊತ್ತಾಗಿದೆ.

ಆನಂದ್ ಸಿಂಗ್ ಮೇಲೆ ಗಣೇಶ್ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ, ಅಂತಹ ಬೆಳವಣಿಗೆ ಆಗಿದ್ದರೆ ಮಾಹಿತಿ ಬಂದಿರೋದು. ಹಾಗೆ ಆಗಿರಲಿಕ್ಕಿಲ್ಲ.

| ಪರಮೇಶ್ವರ್, ಡಿಸಿಎಂ

ಕಣ್ಣೀರಿಟ್ಟ ಗಣೇಶ್

‘ಈ ಘಟನೆ ನಡೆಯಬಾರದಿತ್ತು, ಏಕೆ ಈ ರೀತಿ ಆಯಿತೋ ತಿಳಿಯುತ್ತಿಲ್ಲ. ನಾನು ಹೇಗೆ ಮುಖ ತೋರಿಸಲಿ, ನನ್ನ ರಾಜಕೀಯ ಭವಿಷ್ಯವೇ ಮುಗಿಯಿತು’ ಎಂದು ಕಂಪ್ಲಿ ಶಾಸಕ ಗಣೇಶ್ ತಮ್ಮ ಆಪ್ತ ಶಾಸಕರ ಸಮ್ಮುಖ ಕಣ್ಣೀರಿಟ್ಟರೆಂದು ಮೂಲಗಳು ತಿಳಿಸಿವೆ.

ಸಚಿವ ಡಿಕೆಶಿ ಹೇಳಿಕೆ ಗೊಂದಲ

ಶಾಸಕರ ನಡುವೆ ಯಾವುದೇ ಗಲಾಟೆಗಳಾಗಿಲ್ಲ, ಅದೆಲ್ಲ ಊಹಾಪೋಹ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪೇಚಿಗೆ ಸಿಲುಕಿದರು. ಆನಂದ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ಇದ್ದರೂ, ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಇಬ್ಬರೂ ಒಳ್ಳೆಯ ಸ್ನೇಹಿತರು. ರೆಸಾರ್ಟ್​ನಲ್ಲೇ ಇದ್ದಾರೆ. ಇಬ್ಬರೂ ಒಟ್ಟಿಗೆ ಬಂದು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಡಿಕೆಶಿ ಹೇಳಿದರು. ಕೆಲ ಹೊತ್ತಿನಲ್ಲೇ ಸಂಸದ ಡಿ.ಕೆ.ಸುರೇಶ್ ಅವರು ಅಪೊಲೊ ಆಸ್ಪತ್ರೆಯಲ್ಲಿ ಆನಂದ್ ಸಿಂಗ್ ಆರೋಗ್ಯ ವಿಚಾರಣೆಗೆ ಆಗಮಿಸಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಡಿಕೆಶಿ ಹಿಂಜರಿದರು.