ಮತ್ತೆ ಆಸ್ಪತ್ರೆ ಸೇರಿದ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌

ಬೆಂಗಳೂರು: ನಾನು ಆರಾಮಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ವಿಧಾನಸೌಧದಿಂದ ಹೊರಟಿದ್ದ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಇದೀಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ಟಾಗಿದ್ದ ಆನಂದ್‌ ಸಿಂಗ್‌ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಆನಂದ್‌ ಸಿಂಗ್‌ ಇಂದು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.

ವಿಧಾನ ಸಭೆಯಿಂದ ತೆರಳಿದ ಬಳಿಕ ನೇರವಾಗಿ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಯಿಂದ ಊಟ, ಬೇಡ್‌ಶೀಟ್‌ ತಂದಿದ್ದಾರೆ.

ಬೆಳ್ಳಗ್ಗೆಯಿಂದಲೂ ಓಡಾಟ ಮಾಡಿದ್ದರಿಂದಾಗಿ ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗೆಂದು ಬಂದಿದ್ದಾರೆ. ವೈದ್ಯರು ಪರಿಶೀಲನೆ ಬಳಿಕ ಅಡ್ಮಿಟ್‌ ಆಗುವಂತೆ ಸೂಚನೆ ನೀಡಿರುವುದರಿಂದಾಗಿ ಆನಂದ್‌ ಸಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೆರಡು ದಿನ ಅಪೊಲೋ ಆಸ್ಪತ್ರೆಯಲ್ಲಿ ಆನಂದ್ ಸಿಂಗ್‌ಗೆ ಚಿಕಿತ್ಸೆ ನೀಡಲಾಗುತ್ತದೆ.

ಜ. 20ರಂದು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್‌ನಲ್ಲಿ ನಡೆದ ಗಲಾಟೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದರಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಆನಂದ್ ಸಿಂಗ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಸೋಮವಾರ ಸಂಜೆಯಷ್ಟೇ ಇದ್ದಕ್ಕಿದ್ದಂತೆ ಡಿಸ್ಚಾರ್ಜ್ ಆಗಿದ್ದರು. (ದಿಗ್ವಿಜಯ ನ್ಯೂಸ್)