ರಾಜ್ಯ ಕಾಂಗ್ರೆಸ್ ಪಟ್ಟಿ ಅಂತಿಮ

ಬೆಂಗಳೂರು: ದೋಸ್ತಿ ಪಕ್ಷ ಜೆಡಿಎಸ್ ಜತೆಗಿನ ಸೀಟು ಹಂಚಿಕೆ ತಿಕ್ಕಾಟ, ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲೇ ಹೈರಾಣಾಗಿದ್ದ ಕಾಂಗ್ರೆಸ್ ಕೊನೆಗೂ ಲೋಕಸಭೆ ಚುನಾವಣೆಗೆ ಪಕ್ಷದ ಹುರಿಯಾಳುಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಗುರುವಾರ ಹಾಗೂ ಶುಕ್ರವಾರ ದೆಹಲಿಯಲ್ಲಿ ಸಭೆ ನಡೆಸಿದ ರಾಜ್ಯ ನಾಯಕರು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದರು. ಬಳಿಕ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ಸಮಿತಿ, ಅಭ್ಯರ್ಥಿಗಳ ಹೆಸರಿಗೆ ಅಂತಿಮ ಮುದ್ರೆ ಒತ್ತಿದೆ. ಜೆಡಿಎಸ್ ಜತೆಗಿನ ಮೈತ್ರಿಯಂತೆ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಕಾಂಗ್ರೆಸ್ ಇಟ್ಟುಕೊಂಡಿದ್ದು, ಎಂಟು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ.

ಸಿಗಲಿಲ್ಲ ತುಮಕೂರು

ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮುದ್ದಹನುಮೇಗೌಡರಿಗೆ ಹೈಕಮಾಂಡ್ ನಿರಾಸೆ ಮೂಡಿಸಿದೆ. ಅಂತಿಮ ಕ್ಷಣದಲ್ಲಿ ತುಮಕೂರು ಕಾಂಗ್ರೆಸ್ ಪಾಲಾಗಬಹುದೆಂಬ ಊಹೆ ಸುಳ್ಳಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ರಾಜ್ಯಕಿಲ್ಲ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೂ ಪಟ್ಟಿ ತೆರೆ ಎಳೆದಿದೆ.