ಈಗಲ್ಟನ್​ ರೆಸಾರ್ಟ್​ನಲ್ಲೇ ನಡೆಯಿತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ: ಚರ್ಚೆಯಾದ ವಿಚಾರಗಳೇನು?

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಈಗಲ್ಟನ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್​ ಶಾಸಕರು ಇಂದು ಅಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದರು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಅಧಿಕೃತ ಮಾಹಿತಿ ಪ್ರಕಾರ, ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ಬರ ಪರಿಸ್ಥಿತಿ, ಬಜೆಟ್​, ಲೋಕಸಭೆ ಚುನಾವಣೆಗಳ ಕುರಿತು ಸಮಾಲೋಚಿಸಲಾಗಿದೆ.

ಅಲ್ಲದೆ, ರಾಜ್ಯ ಕಾಂಗ್ರೆಸ್​ ಉಸ್ತುವಾರಿಯೂ ಆಗಿರುವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಅವರು ಮುಂಬರುವ ಲೋಕಸಭೆ ಚುನಾವಣೆ, ಮುಂದಿನ ನಿರ್ಧಾರಗಳ ಕುರಿತು ನಾಳೆ ಪಕ್ಷದ ಎಲ್ಲ ಶಾಸಕರೊಂದಿಗೂ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್​ ಅಧಿಕೃತವಾಗಿ ಹೇಳಿಕೊಂಡಿದೆ.

ಇನ್ನೊಂದೆಡೆ, ರಾಜ್ಯದಲ್ಲಿ ರೇಜಿಗೆ ಹುಟ್ಟಿಸಿರುವ ರೆಸಾರ್ಟ್​ ರಾಜಕೀಯದ ಚರ್ಚೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿಯ ಬರ ಅಧ್ಯಯನ ದಾಳ ಉರುಳಿಸಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಕೂಡ ಬರ ಅಧ್ಯಯನ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಹುತೇಕ ನಾಳೆಯ ಹೊತ್ತಿಗೆ ಕಾಂಗ್ರೆಸ್ ಶಾಸಕರನ್ನು ಅವರ ಕ್ಷೇತ್ರಕ್ಕೆ ಕಳುಹಿಸಲು ಕಾಂಗ್ರೆಸ್​ ನಿರ್ಧರಿಸಿದೆ. ನಂತರ ಪ್ರತ್ಯೇಕವಾಗಿ ಬರ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.