ಸರ್ಕಾರದಲ್ಲಿ ಮೇಲುಕೈ ಸಾಧಿಸಲು ಯತ್ನ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಅತಂತ್ರಗೊಂಡಿರುವ ರಾಜ್ಯ ಕಾಂಗ್ರೆಸ್ ಇದೀಗ ಮೈತ್ರಿ ಸರ್ಕಾರದ ಮೇಲೆ ಹಿಡಿತ ಸಾಧಿಸಿ ಮತ್ತೆ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಮುಂದಾಗಿದೆ.

ಈಗಾಗಲೇ ಮೈತ್ರಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ್ದು, ಇಡೀ ಸರ್ಕಾರ ಜೆಡಿಎಸ್ ನಿಯಂತ್ರಣದಲ್ಲೇ ಇತ್ತು. 78 ಶಾಸಕರನ್ನು ಹೊಂದಿದ್ದರೂ, ಲೋಕಸಭೆ ಚುನಾವಣೆ ಕಾರಣಕ್ಕಾಗಿ 37 ಶಾಸಕರನ್ನು ಹೊಂದಿರುವ ಜೆಡಿಎಸ್ ಮಾತಿಗೆಲ್ಲ ಕಾಂಗ್ರೆಸ್ ತಲೆಯಾಡಿಸಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಕೇಂದ್ರದಲ್ಲೂ ಬಿಜೆಪಿಯೇತರ ಸರ್ಕಾರ ರಚನೆಯಾಗುವ ಉತ್ಸಾಹದಲ್ಲಿದ್ದ ಕಾಂಗ್ರೆಸ್​ಗೆ ಫಲಿತಾಂಶ ಆಘಾತ ತಂದಿತ್ತು. ಇದರಿಂದಾಗಿ ಕಾಂಗ್ರೆಸ್ ವರಸೆ ಬದಲಿಸಲು ಶುರುಮಾಡಿದೆ.

ಚುರುಕಾದ ಕಾಂಗ್ರೆಸ್: ಲೋಕಸಭಾ ಚುನಾವಣೆ ಸೋಲಿಗೆ ಮೈತ್ರಿಯೇ ಕಾರಣ. ಜೆಡಿಎಸ್ ಸಂಪರ್ಕ ಮುಂದುವರಿಸುವುದು ಸೂಕ್ತವಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ ಮುಂದೆ ವಿವರಣೆ ನೀಡಿದ್ದರು. ಆದರೆ, ರಾಜ್ಯದ ನಾಯಕರನ್ನು ಸಮಾಧಾನಗೊಳಿಸಿದ್ದ ಹೈಕಮಾಂಡ್, ಮೈತ್ರಿ ಮುರಿದುಕೊಳ್ಳುವುದು ಬೇಡ. ಬದಲಾಗಿ ಸರ್ಕಾರದಲ್ಲಿ ಪಾಲುದಾರಿಕೆ ಇರುವುದರಿಂದ ‘ಅಗ್ರೆಸಿವ್’ ಧೋರಣೆ ಇರಲಿ, ಕಾರ್ಯಕರ್ತರಿಗೆ ಇದು ನಮ್ಮ ಸರ್ಕಾರ ಅನಿಸುವಷ್ಟರ ಮಟ್ಟಿಗೆ ಚುರುಕಾಗಿ ಕೆಲಸ ಮಾಡಿ ಎಂದು ಹೇಳಿಕಳಿಸಿತ್ತು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೂ ಇದೇ ಸೂಚನೆ ನೀಡಲಾಗಿತ್ತು.

ಇದೀಗ ಹಂತಹಂತವಾಗಿ ಜೆಡಿಎಸ್ ಬಗ್ಗಿಸುವ ಕೆಲಸ ಆರಂಭವಾಗಿದೆ. ಕಳೆದ ವಾರ ನಡೆದ ಜಿಲ್ಲಾಡಳಿತಗಳೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿಗಿಂತ ಹೆಚ್ಚಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹೆಚ್ಚು ಆಸ್ಥೆ ತೋರಿದ್ದರು. ಕುಮಾರಸ್ವಾಮಿಗಿಂತಲೂ ಅಧಿಕವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಶಾಸಕರ ಕೋರಿಕೆ ಈಡೇರಿಕೆ: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಕಾಂಗ್ರೆಸ್ ಶಾಸಕರ ಕೋರಿಕೆ ಈಡೇರುತ್ತಿದೆ. ಬಿಡಿಎ ಆಯುಕ್ತರನ್ನು ವರ್ಗಾಯಿಸಬೇಕೆಂಬ ಕಾಂಗ್ರೆಸ್ ಶಾಸಕ ಸೋಮಶೇಖರ್ ಒತ್ತಡಕ್ಕೆ ಸಿಎಂ ಮಣಿದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನು ಬದಲಿಸಿ ಕಾಂಗ್ರೆಸ್ ಶಾಸಕರೊಬ್ಬರಿಗೆ ನೀಡುವ ಆದೇಶ ಸದ್ಯವೇ ಹೊರಬೀಳುವ ಸಾಧ್ಯತೆ ಇದೆ. ತಮ್ಮ ಕ್ಷೇತ್ರಕ್ಕೆ ಕೆಲಸ ಆಗುತ್ತಿಲ್ಲ ಎಂಬ ಶಾಸಕರ ಬೇಡಿಕೆಯನ್ನು ಈಡೇರಿಸಲು ಕೈ ಶಾಸಕರೊಂದಿಗೆ ತಡಮಾಡದೇ ಸಭೆ ನಡೆಸಬೇಕೆಂಬ ಪಕ್ಷದ ತೀರ್ವನವನ್ನೂ ಸಹ ಸಿಎಂ ಒಪ್ಪಿಕೊಂಡಿದ್ದಾರೆ. ಮುಂದಿನ ವಾರದಲ್ಲಿ ಸಭೆ ನಡೆಯುವ ಸಾಧ್ಯತೆಯೂ ಇದೆ. ಈ ಮೂಲಕ ಹಂತಹಂತವಾಗಿ ಸರ್ಕಾರದ ನಿರ್ಧಾರಗಳಲ್ಲಿ ಕಾಂಗ್ರೆಸ್ ಹೆಚ್ಚುಗಾರಿಕೆ ತೋರಿಸುವ ಪ್ರಯತ್ನ ಸದ್ದಿಲ್ಲದೇ ಆರಂಭವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಕೆಪಿಜೆಪಿ ವಿಲೀನವಿಲ್ಲ

ಕರ್ನಾಟಕ ಪ್ರಜ್ಞಾವಂತ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಲಾಗುವುದು ಎಂಬುದು ಕೇವಲ ವದಂತಿ. ಕೆಪಿಜೆಪಿ ಯಾವುದೇ ಪಕ್ಷದೊಂದಿಗೆ ವಿಲೀನಗೊಂಡಿಲ್ಲ ಎಂದು ಪಕ್ಷದ ರಾಜ್ಯಧ್ಯಕ್ಷ ಮಹೇಶ್​ಗೌಡ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *