ಮೈತ್ರಿಯಿಂದ ಕೈ ಅಸ್ತಿತ್ವಕ್ಕೆ ಧಕ್ಕೆ ಆತಂಕ

ಉಡುಪಿ/ಚಿಕ್ಕಮಗಳೂರು: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನ ಪಡೆದಿಲ್ಲ. ಆದರೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಪಕ್ಷಕ್ಕೆ ಆಗಿರುವ ನಷ್ಟ ಮಾತ್ರ ಅಲ್ಲ, ಭವಿಷ್ಯದ ದಿನಗಳಲ್ಲಿ ಮತ್ತೆ ಶೂನ್ಯದಿಂದ ಪಕ್ಷ ಸಂಘಟನೆ ಆರಂಭಿಸಬೇಕಾಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಲ್ಲಿದೆ. ಈಗಾಗಲೇ ಈ ಬಗ್ಗೆ ಕೆಲವು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿಗೆ ಸ್ಪರ್ಧೆಯೊಡ್ಡುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ. ಬಿಜೆಪಿ ವಿರುದ್ಧ ನಮ್ಮ ಮೈತ್ರಿ ಎಂದು ಹೇಳಿಕೊಂಡಿರುವಾಗ ಅವರನ್ನು ಸೋಲಿಸುವ ಸಾಮರ್ಥ್ಯ ಇರುವವರಿಗೆ ಕ್ಷೇತ್ರಗಳನ್ನು ಹಂಚಿಕೆ ಮಾಡಿದರೆ ಮೂಲ ಉದ್ದೇಶ ಸಫಲವಾಗುತ್ತದೆ. ಆದರೆ ಈಗ ಆಗಿರುವ ಕ್ಷೇತ್ರಗಳ ಹಂಚಿಕೆಯನ್ನು ಗಮನಿಸಿದರೆ ಬಿಜೆಪಿ ಗೆಲುವಿನ ಹಾದಿಯನ್ನು ಸುಲಭ ಮಾಡಿಕೊಟ್ಟಂತಾಗಿದೆ ಎಂದು ಹೇಳುತ್ತಿದ್ದಾರೆ.

ವಿಶೇಷ ಎಂದರೆ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಕಣದಲ್ಲಿದ್ದ ಅಭ್ಯರ್ಥಿಗಳು ಗೆಲುವಿನ ಸಮೀಪವೂ ಬಂದಿಲ್ಲ. ಹೀಗಾಗಿ ಕ್ಷೇತ್ರ ಬಿಟ್ಟುಕೊಟ್ಟಿರುವುದನ್ನು ಸಮರ್ಥಿಸಿಕೊಳ್ಳಲು ಆಧಾರವಿಲ್ಲ ಎಂಬುದು ಸ್ಥಳೀಯ ಕಾಂಗ್ರೆಸ್ ನಾಯಕರ ವಾದ.
2009ರ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿಲ್ಲ. 2012ರ ಉಪಚುನಾವಣೆಯಲ್ಲಿ ಜಯ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪ್ರತಿಶತ 46.75 ಮತ ಗಳಿಸಿದ್ದರೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೆಗೌಡ ಪ್ರತಿಶತ 8.45 ಮತ ಗಳಿಸಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಪ್ರತಿಶತ 56.20ರಷ್ಟು ಮತಗಳು (1,81,643) ಸಿಕ್ಕಿದ್ದರೆ ಜೆಡಿಎಸ್ ಅಭ್ಯರ್ಥಿ ವಿ.ಧನಂಜಯಕುಮಾರ್ ಗಳಿಸಿದ ಮತಗಳ ಪ್ರಮಾಣ ಪ್ರತಿಶತ 1.44 (14,895). ಈ ಅಂಕಿ ಅಂಶ ಗಮನಿಸಿದರೆ ಜೆಡಿಎಸ್ ಶಕ್ತಿಯ ಅರಿವಾಗಲಿದೆ.

ಜೆಡಿಎಸ್ ಒತ್ತಡಗಳಿಗೆ ಮಣಿಯುತ್ತಾ ಹೋದರೆ ಕಾಂಗ್ರೆಸ್ ದುರ್ಬಲವಾಗಲಿದ್ದು, ಪಕ್ಷದ ವರಿಷ್ಠರು ಪಕ್ಷದ ಶಕ್ತಿಯನ್ನು ಅರಿತು ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕಿತ್ತು ಎಂಬುದು ಕಾಂಗ್ರೆಸ್ ನಾಯಕರ ವಾದ.

ಕಾರ್ಯಕರ್ತರ ಅಸಮಾಧಾನ: ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಕಾರ್ಯಕರ್ತರು ಅನಿರೀಕ್ಷಿತ ಆಘಾತಕ್ಕೆ ಒಳಗಾಗಿದ್ದು, ಸ್ಥಳೀಯ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಪಂಚಾಯಿತಿ ವ್ಯಾಪ್ತಿಯಲ್ಲೂ ಪ್ರಾಬಲ್ಯ ಹೊಂದಿಲ್ಲ. 14 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 14 ಸಾವಿರ ಮತ ಪಡೆದ ಜೆಡಿಎಸ್‌ಗೆ ಕ್ಷೇತ್ರವನ್ನೇ ಬಿಟ್ಟುಕೊಟ್ಟಿರುವುದು ಏಕೆ ಎನ್ನುವುದು ಕಾರ್ಯಕರ್ತರ ಪ್ರಶ್ನೆ. ನಾವು ಉಡುಪಿಯಲ್ಲಿ ಪ್ರಚಾರ ಮಾಡುವುದಿಲ್ಲ, ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಉಡುಪಿ ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗುಂಪುಗಳಲ್ಲಿ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹರಾಜಿನ ಮೂಲಕ ಕಾರ್ಯಕರ್ತರನ್ನು ಜೆಡಿಎಸ್‌ನವರು ಪಡೆದುಕೊಳ್ಳುತ್ತಾರೆ, ಎಲ್ಲರೂ ಆಗಮಿಸಬೇಕಾಗಿ ವಿನಂತಿ, ಕೈ ಬುಡ್ದ್ ಬೈ ಪತಿಯೆರ್ (ಕೈ ಬಿಟ್ಟು ತೆನೆ ಹಿಡಿದರು) ಮುಂತಾದ ಸ್ಲೋಗನ್‌ಗಳು ಹರಿದಾಡುತ್ತಿವೆ. ಕಾಂಗ್ರೆಸ್ ಮುಕ್ತ ಉಡುಪಿ ಮಾಡಿದ ಜೆಡಿಎಸ್, ಬಿಜೆಪಿಗೆ ಚುನಾವಣೆಗೆ ಮೊದಲೇ ಗೆಲುವು ಎಂದೆಲ್ಲ ಟ್ರೋಲ್ ಮಾಡಲಾಗುತ್ತಿದೆ. 1978ರಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ ಗೆದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಇಂದು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯೇ ಇಲ್ಲದಂತಾಗಿದೆ ಎಂದು ಬಿಜೆಪಿ ಕಿಚಾಯಿಸಿದೆ.

ಅಮೃತ್ ಶೆಣೈ ರಾಜೀನಾಮೆ: ಎಐಸಿಸಿ ಸದಸ್ಯ, ಉದ್ಯಮಿ ಅಮೃತ್ ಶೆಣೈ ಪಕ್ಷದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ರೀತಿಯ ನಿರ್ಧಾರ ಯಾಕೆ ತೆಗೆದುಕೊಳ್ಳಲಾಯಿತು ಎಂಬ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಉತ್ತರ ನೋಡಿ ಬಳಿಕ ಸದಸ್ಯತ್ವಕ್ಕೆ ರಾಜೀನಾಮೆ ಅಥವಾ ಪಕ್ಷೇತರ ಸ್ಪರ್ಧೆಗೆ ತೀರ್ಮಾನಿಸುತ್ತೇನೆ ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ದೇವೇಗೌಡರು ಕರೆ ಮಾಡಿಲ್ಲ: ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಕರೆ ಮಾಡಿ ಜೆಡಿಎಸ್‌ಗೆ ಆಹ್ವಾನಿಸಿದ್ದಾರೆ, ಹೆಗ್ಡೆ ಒಪ್ಪದಿದ್ದರೆ ಎಸ್.ಎಲ್. ಭೋಜೇಗೌಡರು ಸ್ಪರ್ಧಿಸಲಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ಹೆಗ್ಡೆ ಇದನ್ನು ನಿರಾಕರಿಸುತ್ತಾರೆ. ಅನೇಕ ಬಾರಿ ಸ್ಪಷ್ಟನೆ ನೀಡಿದರೂ ಮತ್ತೆ ಅದೇ ಪ್ರಶ್ನೆ ಕೇಳಲಾಗುತ್ತಿದೆ. ನನಗೆ ದೇವೇಗೌಡರು ಅಥವಾ ಇನ್ಯಾವುದೇ ವ್ಯಕ್ತಿ ಕರೆ ಮಾಡಿ ಆಹ್ವಾನ ನೀಡಿಲ್ಲ, ನಾನು ಬಿಜೆಪಿ ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ನಿರ್ಧಾರ ಬದಲಿಸಲು ಆಗ್ರಹಿಸಿ ಉಡುಪಿ ಕಾಂಗ್ರೆಸ್ ನಿರ್ಣಯ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ನಿರ್ಧಾರ ಬದಲಾಯಿಸುವಂತೆ ಒತ್ತಾಯಿಸಲು ಜಿಲ್ಲಾ ಕಾಂಗ್ರೆಸ್ ಸಭೆ ನಡೆಸಿ ನಿರ್ಣಯ ಕೈಗೊಂಡಿದೆ. ಜೆಡಿಎಸ್ ಪಂಚಾಯಿತಿಯಲ್ಲೂ ಜನಪ್ರತಿನಿಧಿಗಳನ್ನು ಹೊಂದಿಲ್ಲ. ಆದರೆ ಕಾಂಗ್ರೆಸ್ ಬೂತ್ ಮಟ್ಟದಿಂದಲೇ ಕಾರ್ಯಕರ್ತರೊಂದಿಗೆ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಪಕ್ಷಕ್ಕೆ ಈ ಬಾರಿ ಅನುಕೂಲಕರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ನಿರ್ಧಾರ ಬದಲಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಬೇಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸರಸು ಡಿ. ಬಂಗೇರ, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಯತೀಶ್ ಕರ್ಕೇರ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಮಡಿವಾಳ ಕಾರ್ಕಳ, ಮಂಜುನಾಥ ಪೂಜಾರಿ ಹೆಬ್ರಿ, ಸತೀಶ್ ಅಮೀನ್ ಪಡುಕರೆ ಉಡುಪಿ, ಶಂಕರ್ ಕುಂದರ್ ಕೋಟ, ಮಲ್ಯಾಡಿ ಶಿವರಾಮ್ ಶೆಟ್ಟಿ ಕುಂದಾಪುರ, ನವೀನ್‌ಚಂದ್ರ ಸುವರ್ಣ ಕಾಪು, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಗೀತಾ ವಾಗ್ಳೆ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ವಿಘ್ನೇಶ್ ಕಿಣಿ, ಸತೀಶ್ ಪೂಜಾರಿ, ಚಂದ್ರಿಕಾ ಶೆಟ್ಟಿ ಉಪಸ್ಥಿತರಿದ್ದರು.

ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿ ಚುನಾವಣಾ ಕಣಕ್ಕೆ ಇಳಿಯುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ‌್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಮೈತ್ರಿ ನಿರ್ಧಾರದಿಂದ ಅವಮಾನವಾಗಿದೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ನಿಲ್ಲಿಸಬೇಕು. ನಿರ್ಧಾರ ಮರುಪರಿಶೀಲಿಸಬೇಕು ಎಂದು ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನಕ್ಕೆ ಕಾರ‌್ಯಕರ್ತರು ಮುಂದಾಗಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಬೇಕು. ಆರತಿ ಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಮತದಾರರಿದ್ದಾರೆ. ಆದ್ದರಿಂದ ದೇವೇಗೌಡರಲ್ಲಿ ಈ ಬಗ್ಗೆ ಮನವಿ ಮಾಡುತ್ತಿದ್ದೇನೆ.
| ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ