ಬಹಿರಂಗ ಸಭೆ, ರೋಡ್ ಶೋ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ರೋಡ್ ಶೋ, ಬಹಿರಂಗ ಪ್ರಚಾರ ಸಭೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಸಂಚಲನ ಉಂಟು ಮಾಡಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಬು. ಅರಳಿಕಟ್ಟಿಯಲ್ಲಿ ಉಪಚುನಾವಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು.

ಈ ಚುನಾವಣೆ ಯಾರೂ ಬಯಸಿರಲಿಲ್ಲ. ಆಕಸ್ಮಿಕವಾಗಿ ಬಂದಿದೆ. ಶಿವಳ್ಳಿ ಅಪರೂಪದ ರಾಜಕಾರಣಿ. ರಾಜಕಾರಣಿಗಿಂತ ಅವರು ಜನ ಸೇವಕ. ಅವರ ಸ್ಥಾನವನ್ನು ಅವರ ಪತ್ನಿ ಕುಸುಮಾವತಿಯವರು ತುಂಬಲಿದ್ದು, ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಶಿವಳ್ಳಿ ಮಾಡಿರುವ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ನಾವು ಮತ ಕೇಳುತ್ತಿದ್ದೇವೆ. ಬಿಜೆಪಿ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಕುಂದಗೋಳ, ಚಿಂಚೋಳಿ ಗೆದ್ರೆ ಸಮ್ಮಿಶ್ರ ಸರ್ಕಾರ ಪತನ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, ಹಿಂದೆ ಸಿಎಂ ಆದಾಗ 3 ವರ್ಷಕ್ಕೇ ಅಧಿಕಾರದಿಂದ ಕೆಳಗೆ ಇಳಿದರು. ಭ್ರಷ್ಟಾಚಾರ ಮಾಡಿ, ಜೈಲಿಗೆ ಹೋದರು. ಆರು ಜನ ಬಿಜೆಪಿ ಮಂತ್ರಿಗಳು ಜೈಲಿಗೆ ಹೋಗಿದ್ದರು. ಅಲ್ಲೇನು ಬೀಗತನ ಮಾಡಲು ಹೋಗಿದ್ರಾ? ಎಂದು ಟೀಕಿಸಿದರು.

ಈಗ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ, ಹಾಗಿದ್ದರೆ ಬಿಜೆಪಿ ಮಾಡಿರೋ ಸಾಧನೆ ಏನು? ಇನ್ನೊಮ್ಮೆ ಜೈಲಿಗೆ ಹೋಗೋಕೆ ಯಡಿಯೂರಪ್ಪಗೆ ವೋಟ್ ಕೊಡಬೇಕಾ? ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

3 ಬಾರಿ ಆಯ್ಕೆಯಾದ ಸಂಸದ ಪ್ರಲ್ಹಾದ ಜೋಶಿ ಕೊಡುಗೆ ಏನು, ಈ ಊರಿಗೆ ಏನಾದರೂ ಕೊಟ್ಟಿದ್ದಾರೇನಪಾ, ಎಲ್ಲಿದ್ದಿಯಪ್ಪಾ ಜೋಶಿ… ಎಂದು ವ್ಯಂಗ್ಯವಾಡಿದರು.

ನಾನು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳ ಪಟ್ಟಿ ಕೊಡುತ್ತೇನೆ, ನೀವು ಕೊಡ್ತೀರಾ, ಬೇಕಿದ್ದರೆ ಕರೆಯಿರಿ ಒಂದೇ ವೇದಿಕೆಗೆ ಎಂದು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.

ನರೇಂದ್ರ ಮೋದಿ ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ಅವರ ಪಾರ್ಟಿಯಿಂದ ನಮ್ಮ ಶಾಸಕರಿಗೆ 20- 30 ಕೋಟಿ ರೂ.ಗಳ ಆಮಿಷ ಬರುತ್ತದೆ. ವಿರೋಧ ಪಕ್ಷದಲ್ಲಿದ್ದು ಸರಿಯಾಗಿ ಕೆಲಸ ಮಾಡದೇ ನಿತ್ಯ ಸಿಎಂ ಕುರ್ಚಿಯ ಕನಸು ಕಾಣುವ ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಮತ್ತೆ ಸಿಎಂ ಆಗುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯವರು ಕ್ಷೇತ್ರದಲ್ಲಿ ಬರೀ ಸುಳ್ಳು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಅವರ ಮಾತಿಗೆ ಬೆಲೆ ಕೊಡಬೇಡಿ ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಸಚಿವ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಉಮಾಶ್ರೀ, ಸುರೇಶ ಭೈರತಿ, ಮುನಿರತ್ನ, ಎಂ.ಎಸ್. ಅಕ್ಕಿ, ಶ್ರೀನಿವಾಸ, ಆಲ್ಕೋಡ ಹನಮಂತಪ್ಪ, ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ನೀರಲಕಟ್ಟಿ, ಟಿ. ಈಶ್ವರ ಇತರರು ಉಪಸ್ಥಿತರಿದ್ದರು.

ವರೂರು, ಕರಡಿಕೊಪ್ಪ, ಅದರಗುಂಚಿ ಮುಂತಾದ ಗ್ರಾಮಗಳಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸಿದರು.

ಬೆಳಗಲಿ ಗ್ರಾಮದಲ್ಲಿ ಸಿದ್ದರಾಮಯ್ಯ ಜೊತೆಗೂಡಿದ ಸಚಿವ ಡಿ.ಕೆ. ಶಿವಕುಮಾರ ತೆರೆದ ವಾಹನದಲ್ಲಿ ಸಂಚರಿಸಿ ಮತ ಯಾಚಿಸಿದರು. ಕುಂದಗೋಳ ಕ್ಷೇತ್ರ ದತ್ತು ತೆಗೆದುಕೊಳ್ಳುತ್ತೇನೆ. ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಶಿವಕುಮಾರ ಪ್ರಚಾರದ ವೇಳೆ ಹೇಳಿದರು.

ಬೆಳಗಲಿಯ ರಾಮಪ್ಪ ಸೊಟ್ಟನ್ನವರ ಮನೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಉತ್ತರ ಕರ್ನಾಟಕದ ಕಡಕ್ ರೊಟ್ಟಿ ಊಟ ಸವಿದರು.

ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ಲೋದು:ಉಮೇಶ ಜಾಧವ ಬಿಜೆಪಿಗೆ ಮಾರಾಟ ಆಗಿದ್ದಾರೆ. ಅಲ್ಲಿ ದೊಡ್ಡ ಡೀಲ್ ನಡೆದಿದೆ. ಹಾಗಾಗಿ ಜನ ಅವರಿಗೆ ಅಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಹಾಗಾಗಿ ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ನಾವೇ ಗೆಲ್ಲುವುದು ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೆ ಬಿಜೆಪಿಯವರು ಸಿ.ಎಸ್. ಶಿವಳ್ಳಿ ಅವರಿಗೆ ಆಮಿಷ ಒಡ್ಡಲು ಐದು ಕೋಟಿ ತಗೊಂಡು ಹೋಗಿದ್ದರು. ಶಿವಳ್ಳಿ ಪ್ರಾಮಾಣಿಕರು, ಅವರು ನನಗೆ ಫೋನ್ ಮಾಡಿದ್ದರು. ಅವರ ಆಮಿಷ ನಯವಾಗಿ ತಿರಸ್ಕರಿಸಿ ಕಳಿಸಿದ್ದರು ಎಂದು ಹೇಳಿದರು.

ಒಂದೆಡೆ ತಂದೆ, ಮತ್ತೊಂದೆಡೆ ಮಗ: ಕುಂದಗೋಳ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ಮಂಗಳವಾರ ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರೆ, ಮತ್ತೊಂದೆಡೆ ಅವರ ಪುತ್ರ ಶಾಸಕ ಡಾ. ಯತೀಂದ್ರ ಜನರನ್ನು ಭೇಟಿ ಮಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿಯ ಹುಬ್ಬಳ್ಳಿ ತಾಲೂಕಿನ ಗ್ರಾಮಗಳಲ್ಲಿ ಸಿದ್ದರಾಮಯ್ಯ ದಿನವಿಡೀ ರೋಡ್ ಶೋ, ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡರು. ಕುಂದಗೋಳ ಪಟ್ಟಣ, ಸಮೀಪದ ಕೆಲವು ಹಳ್ಳಿಗಳಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಜಿಲ್ಲೆಯ ಕೆಲ ಮುಖಂಡರೊಂದಿಗೆ ಪಾದಯಾತ್ರೆ ಮಾಡಿ, ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *