ನಮಗೆ ಬಹುಮತ ಇಲ್ಲ ಎಂದು ಯಾರು ಹೇಳಿದ್ದು: ಸೋನಿಯಾ ಗಾಂಧಿ

ನವದೆಹಲಿ: ನಮಗೆ ಬಹುಮತ ಇಲ್ಲ ಎಂದು ಯಾರು ಹೇಳಿದ್ದು? ಶುಕ್ರವಾರ ನಾವು ಜಯ ಸಾಧಿಸುತ್ತೇವೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್​, ಸಮಾಜವಾದಿ ಪಾರ್ಟಿ(ಎಸ್​ಪಿ), ತೆಲುಗುದೇಶಂ (ಟಿಡಿಪಿ) ಮತ್ತು ನ್ಯಾಷನಲ್​ ಕಾನ್ಫರೆನ್ಸ್​ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದವು. ಸ್ಪೀಕರ್​ ಸುಮಿತ್ರಾ ಮಹಾಜನ್​ ಅವರು ಅವಿಶ್ವಾಸ ಗೊತ್ತುವಳಿಯನ್ನು ಅಂಗೀಕರಿಸಿ, ಶುಕ್ರವಾರ ಇದರ ಮೇಲೆ ಚರ್ಚೆ ನಡೆಸಲು ದಿನಾಂಕ ನಿಗದಿ ಪಡಿಸಿದ್ದರು.

ಕಾಂಗ್ರೆಸ್​ ಪಕ್ಷ ಇತರ ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತಿದ್ದು ಅವರ ಬೆಂಬಲದೊಂದಿಗೆ ಅವಿಶ್ವಾಸ ಗೊತ್ತುವಳಿ ಮತದಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನ ವಿಪಕ್ಷಗಳ ಅವಿಶ್ವಾಸ ಮಂಡನೆಯ ಕುರಿತು ಪ್ರತಿಕ್ರಿಯಿಸಿದ ಸಚಿವ ಅನಂತ್​ ಕುಮಾರ್​, “ವಿಪಕ್ಷಗಳಿಗೆ ನರೇಂದ್ರ ಮೋದಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲದೇ ಇರಬಹುದು. ಆದರೆ, ದೇಶದ ನಾಗರಿಕರು ಈ ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ನಾನು ಲೋಕಸಭೆಯಲ್ಲಿಯೇ ಸ್ಪಷ್ಟಪಡಿಸಲು ಬಯಸುತ್ತೇನೆ,” ಎಂದು ಹೇಳಿದ್ದಾರೆ. (ಏಜೆನ್ಸೀಸ್​)