ತುಲಾಭಾರ ಮಾಡುವಾಗ ಉರುಳಿ ಬಿದ್ದ ಕೇಂದ್ರ ಮಾಜಿ ಸಚಿವ ಶಶಿ ತರೂರ್​ ತಲೆಗೆ ಆರು ಹೊಲಿಗೆ

ತಿರುವನಂತಪುರ: ಲೋಕಸಭೆ ಚುನಾವಣೆಯಲ್ಲಿ ಗೆಲುವು ದಕ್ಕಿಸಿಕೊಡು, ಸುನಂದಾ ಪುಷ್ಕರ್​ ಸಾವಿನ ಪ್ರಕರಣದಿಂದ ಮುಕ್ತಿ ಕೊಡಿಸು ಎಂದು ಹೇಳಿ ತುಲಾಭಾರ ಹರಕೆ ತೀರಿಸಲು ಮುಂದಾದ ಕೇಂದ್ರದ ಮಾಜಿ ಸಚಿವ ಶಶಿ ತರೂರ್​ ತುಲಾಭಾರದ ತಕ್ಕಡಿಯಿಂದ ಉರುಳಿ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಅವರ ತಲೆಗೆ 6 ಹೊಲಿಗೆಗಳನ್ನು ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾಂಗ್ರೆಸ್​ನಿಂದ ಸ್ಪರ್ಧಿಸುತ್ತಿರುವ ಶಶಿ ತರೂರ್​ ಕೇರಳದಲ್ಲಿ ಹೊಸ ವರ್ಷಾಚರಣೆ ವಿಶು ನಿಮಿತ್ತ ಸೋಮವಾರ ತಿರುನಂತಪುರ ದೇಗುಲಕ್ಕೆ ತೆರಳಿದ್ದರು. ದೇವರಿಗೆ ಪೂಜೆ ಸಲ್ಲಿಸಿದ ಅವರು, ಹರಕೆ ತೀರಿಸಲು ತುಲಾಭಾರ ಮಾಡಿಸಿಕೊಳ್ಳಲು ಮುಂದಾದರು. ಹಣ್ಣು, ತುಪ್ಪ, ಅಕ್ಕಿ, ಸಕ್ಕರೆ, ಬೆಲ್ಲ ಮತ್ತಿತರ ವಸ್ತುಗಳನ್ನು ಬಳಸಿ ತುಲಾಭಾರ ಮಾಡಿಸುವಾಗ ಶಶಿ ತರೂರ್​ ಹಠಾತ್ತನೆ ಕೆಳಗುರುಳಿದರು.

ಅವರ ತಲೆಯಿಂದ ರಕ್ತ ಸುರಿಯಲಾರಂಭಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಮತ್ತಿತರ ಸಾರ್ವಜನಿಕರು ಶಶಿ ತರೂರ್​ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ತಲೆಗೆ ಆರು ಹೊಲಿಗೆ ಹಾಕಿದರು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿ, ಮನೆಗೆ ಕಳುಹಿಸಿದರು. (ಏಜೆನ್ಸೀಸ್​)