ಬಿಜೆಪಿಯತ್ತ ಬೇಗ್ ಹೆಜ್ಜೆ: ಕೇಂದ್ರ ಸಚಿವ ಶಹನವಾಜ್ ಹುಸೇನ್ ಜತೆ ಸಂಪರ್ಕ

ಬೆಂಗಳೂರು: ಕಾಂಗ್ರೆಸ್​ನ ನೆಮ್ಮದಿ ಭಂಗಕ್ಕೆ ಕಾರಣವಾಗಿರುವ ಶಾಸಕ ರೋಷನ್ ಬೇಗ್, ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದೆ. ನಾವು (ಮುಸ್ಲಿಮ್ ಒಂದೇ ಪಕ್ಷಕ್ಕೆ ನಿಷ್ಠರಾಗಿರಬಾರದು. ಅಗತ್ಯ ಬಿದ್ದರೆ ಬಿಜೆಪಿ ಜತೆಯೂ ಕೈಜೋಡಿಸಬೇಕು. ರಾಜ್ಯದಲ್ಲಿ ಮುಸ್ಲಿಂರಿಗೆ ಏನಾಯಿತು ಹೇಳಿ? ಮುಸ್ಲಿಮರು ಅವಮಾನದೊಂದಿಗೆ ಒಂದು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ. ನಾವು ಘನತೆ, ಗೌರವದೊಂದಿಗೆ ಬಾಳುವವರು. ಎಲ್ಲಿ ನಮಗೆ ಗೌರವ ಇಲ್ಲವೋ ಅಲ್ಲಿ ಇರುವುದು ಯಾಕೆ? ಎಂಬ ರೋಷನ್ ಬೇಗ್ ಹೇಳಿಕೆ ಈ ಊಹಾಪೋಹಕ್ಕೆ ಪುಷ್ಟಿ ನೀಡಿದೆ.

ವಿಜಯವಾಣಿಗೆ ಪ್ರತಿಕ್ರಿಯಿಸಿದ ಬೇಗ್, ಬಿಜೆಪಿ ಸೇರುವ ಕುರಿತು ಯೋಚನೆ ಮಾಡಿಲ್ಲ. ಆ ಬಗ್ಗೆ ಮುಂದೆ ಯೋಚಿಸುತ್ತೇನೆೆ ಎಂದರು. ಉನ್ನತ ಮೂಲಗಳ ಪ್ರಕಾರ ಕೇಂದ್ರ ಸಚಿವ ಶಹನವಾಜ್ ಹುಸೇನ್ ಅವರು ರೋಷನ್ ಬೇಗ್ ಜತೆ ಸಂಪರ್ಕದಲ್ಲಿದ್ದು, ಲೋಕಸಮರದ ಫಲಿತಾಂಶ ಪ್ರಕಟವಾದ ನಂತರ ಪಕ್ಷಾಂತರ ತೀರ್ಮಾನ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯ ಘಾಟು ಅರಿತ ಕಾಂಗ್ರೆಸ್ ನಾಯಕರು, ರೋಷನ್ ಬೇಗ್​ಗೆ ನೇರ ಸವಾಲೆಸೆದಿದ್ದಾರೆ. ಇಷ್ಟು ದಿನ ಯಾಕೆ ಸುಮ್ಮನಿದ್ದರು? ಬಹುಶಃ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಕ್ಕೆ ತೀರ್ಮಾನ ಮಾಡಿರಬಹುದು ಎಂದು ಸಚಿವ ಜಮೀರ್ ಅಹಮದ್ ತಿಳಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಪ್ರತಿಕ್ರಿಯಿಸಿ, ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಿವಾಜಿನಗರದಿಂದ ಗೆದ್ದು ಬರಲಿ. ಕಾಂಗ್ರೆಸ್​ನಲ್ಲಿ ಸರಿ ಇಲ್ಲ ಎಂದಾದರೆ ಬಿಜೆಪಿ ಸೇರಲಿ ಎಂದು ಸವಾಲೆಸೆದಿದ್ದಾರೆ.

ಆಪರೇಷನ್ ಕಮಲಕ್ಕೆ ಬಲ?

ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವ ಸಂದರ್ಭದಲ್ಲಿಯೇ ರೋಷನ್ ಬೇಗ್ ಸಿಡಿದಿರುವುದು, ಪ್ರತಿಪಕ್ಷದ ಪ್ರಯತ್ನಕ್ಕೆ ಬಲ ಬರಬಹುದೆಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆದು ಅಂತರ ಕಾಯ್ದುಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಜತೆ ರೋಷನ್ ಬೇಗ್ ಸೇರಿದ್ದೇ ಆದರೆ ಆ ಗುಂಪಿಗೆ ಇನ್ನಷ್ಟು ಮಂದಿ ಸೇರಬಹುದೆಂದು ಹೇಳಲಾಗುತ್ತಿದೆ. ಜಾಫರ್ ಷರೀಫ್ ಕಾಲಾನಂತರ ರಾಜ್ಯದ ಮುಸ್ಲಿಂ ನಾಯಕರ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೇಗ್ ಮಾತುಗಳನ್ನು ಪಕ್ಷದ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಒಂದು ವೇಳೆ, ಅವರು ಪಕ್ಷ ಬಿಟ್ಟರೆ ದೊಡ್ಡ ನಷ್ಟವೇನಿಲ್ಲವಾದರೂ ಪ್ರತಿಪಕ್ಷ ಬಿಜೆಪಿಗೆ ಒಂದು ಪ್ರಮುಖ ಅಸ್ತ್ರ ಕೊಟ್ಟಂತಾಗುತ್ತದೆಂಬುದನ್ನು ಅರಿತಿದ್ದಾರೆ.

ರೋಷಾಗ್ನಿ ಹಿಂದೆ ಗೌಡರ ಕೈ?

ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿರುವ ರೋಷನ್ ಬೇಗ್ ಹೇಳಿಕೆ ಹಿಂದೆ ಜೆಡಿಎಸ್ ನಾಯಕರ ಕುಮ್ಮಕ್ಕು ಇದೆ ಎಂಬ ಮಾತು ಕೇಳಿ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಲಾಬಿಗೆ ಪ್ರತಿತಂತ್ರ, ಎಚ್.ಡಿ.ಕುಮಾರಸ್ವಾಮಿ ಪದಚ್ಯುತಗೊಳಿಸಲು ನಡೆಯುತ್ತಿದೆ ಎನ್ನಲಾದ ಪ್ರಯತ್ನಗಳನ್ನು ವಿಫಲಗೊಳಿಸಲು ಬೇಗ್ ಮೂಲಕ ಬಂಡಾಯ ಸೃಷ್ಟಿಸಲಾಗಿದೆ ಎನ್ನಲಾಗುತ್ತಿದೆ. ರೋಷನ್ ಬೇಗ್ ಇತ್ತೀಚಿಗೆ ಕೆಪಿಸಿಸಿ ಕಚೇರಿಗಿಂತ ಹೆಚ್ಚಾಗಿ ಪದ್ಮನಾಭನಗರದ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇವೇಗೌಡರ ನಿವಾಸಕ್ಕೆ ಬಂದಿದ್ದಾಗಲೂ ಬೇಗ್ ಜತೆಗಿದ್ದರು. ಹೀಗೆ ಒಂದು ವರ್ಷದಿಂದ ನಿರಂತರ ಗೌಡರ ಸಂಪರ್ಕದಲ್ಲಿರುವ ಬೇಗ್ ಮೂಲಕ ಸಿದ್ದರಾಮಯ್ಯಗೆ ಕಡಿವಾಣ ಹಾಕಲು ನಡೆದಿರುವ ಪ್ರಯತ್ನವೆಂದೇ ಹೇಳಲಾಗುತ್ತಿದೆ.

ಹ್ಯಾರಿಸ್​ಗೆ ಸಚಿವ ಸ್ಥಾನ?

ಶಾಂತಿನಗರ ಶಾಸಕ ಇನ್ನೊಂದು ವರ್ಷದ ಬಳಿಕ ಸಚಿವರಾಗಲಿದ್ದಾರೆ. ಈ ಸಂಗತಿಯನ್ನು ಹಾಲಿ ಸಚಿವ ಜಮೀರ್ ಅಹಮದ್ ಖಚಿತಪಡಿಸಿದ್ದಾರೆ. ಯಾರೂ ಗೂಟ ಹೊಡೆದುಕೊಂಡು ಇರಲು ಸಾಧ್ಯವಿಲ್ಲ. ಇನ್ನೊಂದು ವರ್ಷದ ಬಳಿಕ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ಎಲ್ಲರಿಗೂ ಅವಕಾಶ ಸಿಗಬೇಕಾಗುತ್ತದೆ ಎಂದು ಜಮೀರ್ ಹೇಳಿದರು.

ಬೇಗ್ ಪಕ್ಷದ ಹಿರಿಯ ಹಾಗೂ ಜವಾಬ್ದಾರಿಯುತ ನಾಯಕ. ಏನಾದರೂ ನೋವು, ಸಮಸ್ಯೆಗಳಿದ್ದರೆ ಹೈಕಮಾಂಡ್ ಗಮನಕ್ಕೆ ತರಬಹುದಿತ್ತು. ನೇರ ಆಪಾದನೆ ಸರಿಯಲ್ಲ, ಸಮಂಜಸವೂ ಅಲ್ಲ. ಬೇಗ್ ಜತೆ ಮಾತನಾಡಲು ಪ್ರಯತ್ನಿಸಿದೆ, ಮೊಬೈಲ್​ಸ್ವಿಚ್ ಆಫ್ ಆಗಿತ್ತು. ಹೀಗೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದರಿಂದಲೇ ಕಾಂಗ್ರೆಸ್ ನೆಲಕಚ್ಚುತ್ತಿದೆ. ಇದೇ ರೀತಿ ಮುಂದುವರಿದರೆ ಪಕ್ಷಕ್ಕೆ ಉಳಿಗಾಲ ಇಲ್ಲದಂತಾಗಲಿದೆ.

| ಮಲ್ಲಿಕಾರ್ಜುನ ಖರ್ಗೆ ಸಂಸದ

Leave a Reply

Your email address will not be published. Required fields are marked *