ಸಿಎಂ ಸೋಲಿಸುವುದೇ ನನ್ನ ಗುರಿ: ಕಾಂಗ್ರೆಸ್​ಗೆ ಗುಡ್​ ಬೈ ಹೇಳಿದ ರೇವಣ ಸಿದ್ದಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರು. ನನಗೆ ಟಿಕೆಟ್‌ ಕೊಡ್ತೀನಿ ಅಂತಾ ಹೇಳಿ ಮಾತು ತಪ್ಪಿದ್ದಾರೆ. ವರುಣ ಕ್ಷೇತ್ರ ನಿಮಗೆ ಅನುವಂಶೀಯವಾಗಿ ಬಂದಿದೆಯೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್​ ಮುಖಂಡ ಹಾಗೂ ನಿವೃತ್ತ ಪೊಲೀಸ್​ ಅಧಿಕಾರಿ ಎಲ್.ರೇವಣ ಸಿದ್ದಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸೋಲಿಸುವುದೇ ನನ್ನ ಗುರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ನಿನ್ನೆಯೇ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಆದರೆ, ಸೂಕ್ತ ಹಾಗೂ ಸಮರ್ಥ ಎನಿಸುವ ಅಭ್ಯರ್ಥಿಗೆ ಬೆಂಬಲಿಸುತ್ತೇನೆ. ನಾನು ಪಕ್ಷಾತೀತವಾಗೇ ಇರುತ್ತೇನೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಬೆಂಬಲ ನೀಡುತ್ತೇನೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಮಾತಿನ ಪ್ರಹಾರ ನಡೆಸಿದರು.

ಸಿಎಂ ಸ್ಪರ್ಧೆಗೆ ಕಾಂಗ್ರೆಸ್​ನಲ್ಲೇ ವಿರೋಧವಿತ್ತು
ನಾನು 2004ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ​​ ಸ್ಪರ್ಧೆ ಮಾಡಿದ್ದೆ. ಆಗ ಜೆಡಿಎಸ್​ನಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. 2006ರ ಉಪಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡಲಾಯ್ತು. ಆಗ ಅವರ ಸ್ಪರ್ಧೆಗೆ ಕಾಂಗ್ರೆಸ್​​ನಲ್ಲೇ ವಿರೋಧವಿತ್ತು. ಅದೆಲ್ಲದರ ನಡುವೆಯೂ ನಾನು ಅವರ ಗೆಲುವಿಗಾಗಿ ಶ್ರಮಿಸಿದ್ದೆ.

ಸಿದ್ದರಾಮಯ್ಯ ವಚನ ಭ್ರಷ್ಟರು
ಸಿದ್ದರಾಮಯ್ಯ ನನ್ನ ಮನೆಗೆ ಬಂದು ಬೆಂಬಲ ಕೇಳಿಕೊಂಡಿದ್ದರು. ಮುಂದೆ ಕ್ಷೇತ್ರ ಪುನರ್ವಿಂಗಡಣೆ ಆಗುತ್ತದೆ ನಾನೊಂದು, ನೀವೊಂದು ಕ್ಷೇತ್ರದಲ್ಲಿ ನಿಲ್ಲೋಣ ಎಂದಿದ್ದರು. ಆದರೆ, 2008ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವಚನ ಭ್ರಷ್ಟರಾದರು. ನಾನು ಅನಿವಾರ್ಯವಾಗಿ ಮುಖಾಮುಖಿ ಸ್ಪರ್ಧಿಸಬೇಕಾಯಿತು. ಅವರು ಗೆದ್ದರು, ನಾನು ಸೋತೆ. ಮತ್ತೆ ಸಿದ್ದರಾಮಯ್ಯ ನಮ್ಮ ಮನೆಗೆ ಬಂದರು. ಅವರ ಮಾತಿಗೆ ಒಪ್ಪಿ ಕಾಂಗ್ರೆಸ್ ಸೇರಿದ್ದೆ. ಅವರು ಗೆದ್ದಾಗ ನಾನು ಬಾವುಟ ಎತ್ತಿ ಹಿಡಿದಿದ್ದೆ. ಆದರೆ, 2013ರಿಂದಲೂ ನನ್ನನ್ನು ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಕು ಪ್ರಾಣಿ ರೀತಿ ನನ್ನನ್ನು ನಡೆಸಿಕೊಂಡರು
ಸಿದ್ದರಾಮಯ್ಯ ನನ್ನನ್ನು ಸಾಕು ಪ್ರಾಣಿ ರೀತಿ ನಡೆಸಿಕೊಂಡರು. ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ನಮ್ಮ ಮನೆಗೆ‌ ಬಂದಿದ್ದರು. ನಮ್ಮ ಮನೆಯ ಸಾಕು ಪ್ರಾಣಿಗಳನ್ನು ನಾವು ಏನಾದರೂ ಕೊಟ್ಟು ಸಮಾಧಾನ ಮಾಡುತ್ತೇವೆ. ಸಿದ್ದರಾಮಯ್ಯ ಅದೇ ರೀತಿ ನನ್ನನ್ನು ನಡೆಸಿಕೊಂಡರು. ಸಾರ್ವಜನಿಕವಾಗಿ ನನ್ನನ್ನು ಹೀಯಾಳಿಸಿದರು. ನಾನು ಕಾಂಗ್ರೆಸ್​ನಲ್ಲೇ ಇದ್ದರು ತಂದೆ, ಮಗ ನಾಮಪತ್ರ ಸಲ್ಲಿಸಿದರ ಬಗ್ಗೆ ಸೌಜನ್ಯಕ್ಕೂ ಮಾಹಿತಿ ನೀಡಲಿಲ್ಲ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *