ಮಮತಾ ಬೆಂಬಲಿಸಿ ಉಪವಾಸ ಸತ್ಯಾಗ್ರಹ

ಮಂಗಳೂರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಧುರೀಣ ಬಿ.ಜನಾರ್ದನ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲೇ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಶಾರದಾ ಚಿಟ್‌ಫಂಡ್ ಹಗರಣ ಕುರಿತ ವಿಚಾರಣೆ ಮಂಗಳವಾರ ನಡೆಯಲಿದ್ದು, ಬಳಿಕ ಸತ್ಯಾಗ್ರಹ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ಮೋದಿ ಅಲ್ಲಿನ ಸರ್ಕಾರವನ್ನೇ ಅಸ್ಥಿರಗೊಳಿಸುವ ಸಂಚಿನಲ್ಲಿದ್ದಾರೆ, ಅದಕ್ಕಾಗಿ ಸಿಎಂ ಸೆಡ್ಡು ಹೊಡೆದು, ತಮ್ಮ ಅಧಿಕಾರಿ, ಪೊಲೀಸ್ ಆಯುಕ್ತರನ್ನು ರಕ್ಷಿಸಲು ಮುಂದಾಗಿದ್ದಾರೆ. ಜನರ ರಕ್ಷಣೆಗಾಗಿ ತಾನು ಸಾಯುವುದಕ್ಕೂ ಸಿದ್ಧ ಎನ್ನುತ್ತಿದ್ದಾರೆ, ಆದರೆ ಅವರು ಸಾಯಬಾರದು, ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ತೀರ್ಪು ಬರಬೇಕು ಎಂದರು.

ಮಮತಾ ಮೇಲೆ ಹಗರಣ ಆರೋಪ ಮೇಲಿರಬಹುದು. ಆದರೆ ನ್ಯಾಯಾಲಯಗಳೆಲ್ಲ ಸರಿಯಾಗಿ ತೀರ್ಪು ನೀಡಿವೆಯೇ ಎಂದು ಪ್ರಶ್ನಿಸಿದರು. ಮಮತಾ ಬ್ಯಾನರ್ಜಿಯನ್ನು ನಾನು ತಯಾರು ಮಾಡಿದ್ದು. ಅದನ್ನು ಆಕೆ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಆಕೆಯ ಜನಪರ ಹೋರಾಟವನ್ನು ಬೆಂಬಲಿಸುತ್ತೇನೆ ಎಂದರು. ಅಲ್ಲಿ ಸರ್ಕಾರಕ್ಕೂ ಹಗರಣಕ್ಕೂ ಯಾವುದೇ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪದ್ಮರಾಜ್, ಊರ್ಮಿಳಾ ರಮೇಶ್ ಕುಮಾರ್, ಡಾ.ಬಿ.ಜಿ.ಸುವರ್ಣ, ಮಾಧವ ಸುವರ್ಣ, ಬಿ.ಬಿ.ಕಟ್ಟೆಮಾರ್, ದೇವೇಂದ್ರ ಪೂಜಾರಿ, ಹರಿಶ್ಚಂದ್ರ, ಶೇಖರ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಪತ್ರಕರ್ತರ ಜತೆ ವಾಗ್ವಾದ: ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಚಾರಣೆಗೆ ಸಿಬಿಐ ಮುಂದಾಗಿದೆ. ಹಗರಣ ಆರೋಪ ಎದುರಿಸುತ್ತಿರುವ ರಾಜೀವ್ ಪರವಾಗಿ ಸಿಎಂ ಮಮತಾ ನಿಂತಿದ್ದಾರೆ. ಅವರಿಗೆ ನಿಮ್ಮ ಬೆಂಬಲ ಭ್ರಷ್ಟಾಚಾರ ಬೆಂಬಲಿಸಿದಂತಲ್ಲವೇ? ಧಾರ್ಮಿಕ ಕ್ಷೇತ್ರದಲ್ಲಿ ಉಪವಾಸ ಸತ್ಯಾಗ್ರಹ ಸರಿಯೇ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಜನಾರ್ದನ ಪೂಜಾರಿ ಆಕ್ರೋಶಗೊಂಡರು. ಪ್ರಶ್ನೆಗೆ ಉತ್ತರಿಸುವ ಬದಲು ‘ಇನ್ನೂ ನಿಮ್ಮ ಪ್ರಶ್ನೆ ಇದೆಯೇ?’ ಎಂದು ಆಕ್ರೋಶದಿಂದ ಕೇಳಿದರಲ್ಲದೆ, ‘ಇದ್ದರೆ ಹೊರಗೆ ಕಳುಹಿಸುತ್ತೇನೆ’ ಎಂದು ಹೇಳಿದಾಗ, ‘ಪ್ರಶ್ನೆಗಳಿಗೆ ಹೀಗೆ ಉತ್ತರಿಸುವುದು ಸರಿಯಲ್ಲ’ ಎಂದು ಪತ್ರಕರ್ತರು ತಿಳಿಹೇಳಿದರು. ಈ ಸಂದರ್ಭ ಪತ್ರಕರ್ತರು -ಪೂಜಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಪತ್ರಕರ್ತರ ಪ್ರಶ್ನೆಗೆ ಪೂಜಾರಿ ಉತ್ತರಿಸಲಿಲ್ಲ.