More

  ‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!

  ನವದೆಹಲಿ : ಕಲಹವನ್ನು ತಡೆಯಲು ಅತ್ಯಂತ ಸರಳವಾದ ಆಂಗ್ಲಪದವೆಂದರೆ ‘ಸಾರಿ’ ಎಂದು ಹೇಳುತ್ತಾರೆ. ಈ ಪದವನ್ನು ಕ್ಲಿಷ್ಟವಾದ ಶಬ್ದಗಳನ್ನೇ ತಮ್ಮ ಭಾಷಣ ಮತ್ತು ಸಂಭಾಷಣೆಯಲ್ಲಿ ಬಳಸುವುದಕ್ಕೆ ಹೆಸರುವಾಸಿಯಾಗಿರುವ ಕೇರಳದ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ! ಇನ್ನು ಯಾರಿಗೆ ಅನ್ನುವುದೂ ಅಷ್ಟೇ ರೋಚಕ ವಿಷಯ… ಮುಂದೆ ಓದಿ!

  ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ವಿಮೋಚನಾ ಚಳುವಳಿಯ ಬಗ್ಗೆ ಆಡಿದ ಮಾತುಗಳಿಗೆ ನಿನ್ನೆ ಕಹಿಯಾದ ಪ್ರತಿಕ್ರಿಯೆಯನ್ನು ತಿರುವನಂತಪುರಂ ಕ್ಷೇತ್ರದ ಸಂಸದರಾದ ತರೂರ್, ನೀಡಿದ್ದರು. “ಅಂತರರಾಷ್ಟ್ರೀಯ ಶಿಕ್ಷಣ : ನಮ್ಮ ಪ್ರಧಾನಿ ಬಾಂಗ್ಲಾದೇಶಕ್ಕೆ ಭಾರತದ ‘ಸುಳ್ಳು ಸುದ್ದಿ’ಯ ರುಚಿ ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ ಬಾಂಗ್ಲಾದೇಶವನ್ನು ಮುಕ್ತಗೊಳಿಸಿದ್ದು ಯಾರು ಎಂಬುದು ಪ್ರತಿಯೊಬ್ಬರಿಗೂ ಗೊತ್ತು” ಎಂದು ತರೂರ್ ಟ್ವೀಟ್ ಮಾಡಿದ್ದರು.

  ಪಾಕಿಸ್ತಾನದ ಪೂರ್ವ ಭಾಗವು 1971 ರಲ್ಲಿ ತೀವ್ರ ಹೋರಾಟದ ನಂತರ ವಿಮೋಚನೆ ಪಡೆದು ಬಾಂಗ್ಲಾದೇಶ ಹುಟ್ಟಿಕೊಂಡಿದ್ದು ಇತಿಹಾಸ. ಇದೀಗ ಬಾಂಗ್ಲಾದೇಶ 50ನೇ ರಾಷ್ಟ್ರೀಯ ದಿವಸದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೆ ತೆರಳಿರುವ ಪ್ರಧಾನಿ ಮೋದಿ ನಿನ್ನೆ ‘ಬಾಂಗ್ಲಾದೇಶ ವಿಮೋಚನಾ ಹೋರಾಟದ ಸಮಯದಲ್ಲಿ ತಾವು ಸತ್ಯಾಗ್ರಹ ಮಾಡಿ ಜೈಲಿಗೆ ಸಹ ಹೋಗಿದ್ದಾಗಿ’ ಹೇಳಿದರೆಂಬ ವರದಿಯನ್ನು ಆಧರಿಸಿ ತರೂರ್ ಈ ಪ್ರತಿಕ್ರಿಯೆ ನೀಡಿದ್ದರೆನ್ನಲಾಗಿದೆ. ಇತರ ಹಲವಾರು ಜನರೂ, ನಾಯಕರೂ ಈ ಬಗ್ಗೆ ಕಾಮೆಂಟ್ ಮಾಡಿದ್ದರು.

  ಇದನ್ನೂ ಓದಿ: ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ

  ಇದೀಗ ಮತ್ತೆ ಟ್ವೀಟ್ ಮಾಡಿರುವ ತರೂರ್, “ನನ್ನ ತಪ್ಪಿರುವಾಗ ಒಪ್ಪಿಕೊಳ್ಳಲು ನನಗೆ ಯಾವುದೇ ಸಮಸ್ಯೆ ಇಲ್ಲ. ಹೆಡ್​ಲೈನ್ಸ್ ಮತ್ತು ಟ್ವೀಟ್​ಗಳ ಕ್ವಿಕ್ ರೀಡಿಂಗ್​ ಆಧರಿಸಿ ನಾನು ಪ್ರಧಾನಿ ಮೋದಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇಂದಿರಾ ಗಾಂಧಿ ಅವರ ಕೊಡುಗೆಯನ್ನು ಉಲ್ಲೇಖಿಸಲು ಮರೆತಿದ್ದಾರೆ ಎಂದು ತಿಳಿದಿದ್ದೆ. ಆದರೆ ವಸ್ತುತಃ ಅವರು ಆ ಬಗ್ಗೆ ಮಾತನಾಡಿದ್ದಾರೆ. ಸಾರಿ!” ಎಂದಿದ್ದಾರೆ.

  ತಮ್ಮ ಈ ಟ್ವೀಟ್​ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪೂರ್ಣ ಚಿತ್ರಣ ನೀಡುವ ಮಾಧ್ಯಮ ವರದಿಯೊಂದನ್ನೂ ಅಡಕಗೊಳಿಸಿದ್ದಾರೆ. ಸದರಿ ವರದಿಯಲ್ಲಿ ‘ಬಾಂಗ್ಲಾದೇಶದ ವಿಮೋಚನೆಯಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ವಹಿಸಿದ ಮಹತ್ವದ ಪಾತ್ರ ಎಲ್ಲರಿಗೂ ಗೊತ್ತಿರುವುದು’ ಎಂದು ಮೋದಿ ಹೇಳಿರುವುದು ಸ್ಪಷ್ಟವಾಗಿದೆ.

  ರಾಜಕೀಯದಲ್ಲಿ ವಿರೋಧಿ ಎಂದರೆ ಸಾಕು. ಅವರು ಹೇಳುವುದನ್ನು ಪೂರ್ಣವಾಗಿ ಕೇಳಿಸಿಕೊಳ್ಳುವುದಕ್ಕೂ ಮುಂಚೆ ವಿರೋಧ ವ್ಯಕ್ತಪಡಿಸುವುದು ರೂಢಿಯಾಗಿದೆ. ಇಂಥದೇ ತಪ್ಪನ್ನು ಮಾಡಿರುವ ತರೂರ್, ತಪ್ಪಿನ ಅರಿವಾದ ಮೇಲೆ ಬಹಿರಂಗವಾಗಿ ಕ್ಷಮೆ ಕೇಳಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. (ಏಜೆನ್ಸೀಸ್)

  “10 ಮಿಲಿಯನ್ ಬಾಂಗ್ಲಾದೇಶೀಯರಿಗೆ ಭಾರತ ಆಶ್ರಯ ನೀಡಿದೆ”

  ಹುಟ್ಟಿನಿಂದಲೇ ಶುರುವಾಯ್ತು ಈ ಹೆಣ್ಣು ಮಕ್ಕಳ ಸಂಕಟ… ಆಸ್ಪತ್ರೆಯಲ್ಲೇ ಬಿಟ್ಟು ಕಾಣೆಯಾದ ತಾಯಿತಂದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts