ಲಕ್ಷ್ಮೀ ಎತ್ತಂಗಡಿಗೆ ಒತ್ತಡ

ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ಒಳರಾಜಕೀಯದ ಗೊಂದಲ ಇನ್ನೂ ಮುಂದುವರಿದಿದ್ದು, ಈಗ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬದಲಿಸುವಂತೆ ಒತ್ತಡ ತಂತ್ರ ಶುರುವಾಗಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರನ್ನು ಬದಲಾಯಿ ಸುವಂತೆ ಮಹಿಳೆಯರ ತಂಡ ವೊಂದು ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ತಂಡ, ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಮತ್ತೊಬ್ಬರಿಗೆ ಬಿಟ್ಟುಕೊಡಲಿ ಎಂದು ಒತ್ತಾಯಿಸಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಗಲಕ್ಷ್ಮಿ ಚೌಧರಿ ಅವರಿಗೆ ಅವಕಾಶ ಕೊಡಿ, ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತಾರೆ ಎಂದು ಬೇಡಿಕೆ ಇಟ್ಟಿದ್ದಾರೆ.

ನಾಗಲಕ್ಷ್ಮೀ ಚೌಧರಿ ಯಾರು?

ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜಿನ ಉಪ ಪ್ರಾಂಶುಪಾಲೆ ನಾಗಲಕ್ಷ್ಮೀ ಚೌಧರಿ, ಎರಡೂವರೆ ವರ್ಷದ ಹಿಂದಷ್ಟೇ ಕಾಂಗ್ರೆಸ್​ಗೆ ಸೇರಿದ್ದರು. ಕಾಂಗ್ರೆಸ್ ಸದಸ್ಯತ್ವ ಇಲ್ಲದಿದ್ದರೂ ಪರಮೇಶ್ವರ್ ಶಿಫಾರಸಿನ ಮೇಲೆ ನೇರವಾಗಿ ಉತ್ತಮ ಜವಾಬ್ದಾರಿ ದೊರೆಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಯನ್ನಾಗಿ ನೇಮಿಸಿದ್ದರೆಂಬುದು ವಿಶೇಷ ಸಂಗತಿ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಮಹದೇವಪ್ಪ, ಪರಮೇಶ್ವರ್ ಅವರ ಜತೆ ನಿಕಟ ಸಂಪರ್ಕ ಹೊಂದಿರುವ ನಾಗಲಕ್ಷ್ಮಿ ಅವರೀಗ ರಾಜ್ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.