Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಸಚಿವರಾಗಬೇಕಾದ್ರೆ ಸ್ಥಳೀಯರನ್ನು ಗೆಲ್ಲಿಸಿ!

Saturday, 11.08.2018, 3:04 AM       No Comments

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಬೇಕೆ? ಹಾಗಿದ್ದರೆ ನಿಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು. ಹೀಗೊಂದು ಹೊಸ ಸವಾಲನ್ನು ಕಾಂಗ್ರೆಸ್ ತನ್ನ ಶಾಸಕರಿಗೆ ನೀಡಿದೆ.

ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ತನ್ನ ಪಾಲಿಗಿರುವ ಆರು ಸ್ಥಾನ ತುಂಬಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್, ಸ್ಥಳೀಯ ಸಂಸ್ಥೆ ಚುನಾವಣೆವರೆಗೆ ಈ ಸಾಹಸಕ್ಕೆ ಕೈ ಹಾಕದೇ ಇರುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ, ಸಂಪುಟ ವಿಸ್ತರಿಸಿದರೆ ಉಂಟಾಗಬಹುದಾದ ಅಸಮಾಧಾನದಿಂದ ಸ್ಥಳೀಯ ಸಂಸ್ಥೆಯಲ್ಲಿ ಹಿನ್ನಡೆ ಆಗಬಹುದೆಂಬ ಲೆಕ್ಕಾಚಾರ.

ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್, ತರಹವೇರಿ ತಯಾರಿ ಮಾಡುತ್ತಿದೆ. ಇದರ ಭಾಗವಾಗಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಅವರ ವ್ಯಾಪ್ತಿಯಲ್ಲಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂದು ಸಂದೇಶ ಕಳುಹಿಸಿದೆ.

ಸರ್ಕಾರದ ಭಾಗವಾಗಿರುವ ಜೆಡಿಎಸ್ ವಿರುದ್ಧವೇ ಅನೇಕ ಕಡೆ ನೇರ ಹಣಾಹಣಿ ಇರುವುದರಿಂದ ಸಂಕಟದಲ್ಲಿರುವ ಕಾಂಗ್ರೆಸ್, ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿಗಳನ್ನು ದಂಡನಾಯಕರ ರೀತಿ ಹೋರಾಟಕ್ಕೆ ಬಳಸಿಕೊಳ್ಳುತ್ತಿದೆ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು, ಸ್ಥಳೀಯ ಸಂಸ್ಥೆ ಕೈವಶ ಮಾಡಿಕೊಳ್ಳಿ ಎಂದು ತಿಳಿಸಿದೆ.

ಬಾಕಿ ಉಳಿದ ಆರು ಸಚಿವ ಸ್ಥಾನಗಳಿಗೆ 22 ಶಾಸಕರು, ಪರಿಷತ್ ಸದಸ್ಯರು ಆಕಾಂಕ್ಷಿಗಳಿದ್ದಾರೆ. ಸ್ಥಳೀಯ ಸಂಸ್ಥೆಯಲ್ಲಿ ಸೋತರೆ ಸಚಿವ ಸ್ಥಾನವಿರಲಿ ನಿಗಮ ಮಂಡಳಿಗಳಲ್ಲೂ ಪರಿಗಣಿಸುವುದು ಕಷ್ಟ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.

ಲೋಕಸಭೆ ಚುನಾವಣೆಗೆ ಪ್ರಭಾವಿಗಳ ಮೇಲೆ ಒತ್ತಡ

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ತಲಾಷ್​ನಲ್ಲಿರುವ ಎಐಸಿಸಿ, ಪ್ರಭಾವಿಗಳನ್ನೇ ಕಣಕ್ಕಿಳಿಸುವ ಬಗ್ಗೆ ಒಲವು ವ್ಯಕ್ತಪಡಿಸಿದೆ. ದಕ್ಷಿಣದಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನ ನಿರೀಕ್ಷಿಸಿರುವ ಹೈಕಮಾಂಡ್, ಪ್ರಯೋಗಗಳಿಗೆ ಕೈ ಹಾಕದೇ ಹೆಚ್ಚು ಪ್ರಭಾವ ಹೊಂದಿರುವ ನಾಯಕರು ಹಾಗೂ ಹಿರಿಯರನ್ನೇ ಕಣಕ್ಕಿಳಿಸುವ ಬಗ್ಗೆ ಒಲವು ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಯಾವ ಕ್ಷೇತ್ರಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿರುವ ವರಿಷ್ಠರು, ಅಭಿಪ್ರಾಯ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೈಸೂರಿನಿಂದ ಸಿದ್ದರಾಮಯ್ಯ, ಬಳ್ಳಾರಿಯಿಂದ ಸಂತೋಷ್ ಲಾಡ್, ಶಿವಮೊಗ್ಗದಿಂದ ಕಾಗೋಡು ತಿಮ್ಮಪ್ಪ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ, ದಾವಣಗೆರೆಯಿಂದ ಎಸ್.ಎಸ್.ಮಲ್ಲಿಕಾರ್ಜುನ್ ಬಗ್ಗೆ ಒಲವು ವ್ಯಕ್ತಪಡಿಸಿದೆ ಎನ್ನಲಾಗಿದೆ. ಜತೆಗೆ ಉತ್ತರ ಕನ್ನಡದಿಂದ ಪ್ರಶಾಂತ್ ದೇಶಪಾಂಡೆ, ಬಾಗಲಕೋಟೆಯಿಂದ ಎಚ್.ವೈ.ಮೇಟಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಚಿತ್ರದುರ್ಗದಿಂದ ಹಾಲಿ ಸಂಸದರನ್ನು ಬದಲಿಸುವ ಅನಿವಾರ್ಯತೆ ಎದುರಾದರೆ ಮಾಜಿ ಸಚಿವ ಆಂಜನೇಯ, ಬೀದರ್​ನಿಂದ ಧರ್ಮಸಿಂಗ್ ಅಳಿಯ ಕೃಷ್ಣಸಿಂಗ್ ಹೆಸರುಗಳ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆದಿವೆ. ನಾಯಕರ ತುರ್ತು ಸಭೆ

ಗುರುವಾರ ಸಂಪುಟ ಸಭೆ ಬಳಿಕ ತುರ್ತು ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ತಯಾರಿ ಹಾಗೂ ರಾಹುಲ್ ಜತೆಗಿನ ಸಭೆಯಲ್ಲಿ ರ್ಚಚಿಸಬೇಕಾದ ವಿಚಾರ, ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ವಿಚಾರ ವಿನಿಮಯ ಮಾಡಿಕೊಂಡರೆಂದು ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರರು ಸಭೆಯಲ್ಲಿದ್ದರು. ಚುನಾವಣೆಗಳ ತಯಾರಿ ಬಗ್ಗೆ ರಾಹುಲ್​ಗೆ ನೀಡಬೇಕಾದ ಮಾಹಿತಿಗಳ ಕುರಿತು ಹೆಚ್ಚು ಚರ್ಚೆ ನಡೆಸಿದರೆನ್ನಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ವೆಚ್ಚಕ್ಕೆ ಹಣ ಹೊಂದಾಣಿಕೆ ಜವಾಬ್ದಾರಿ ಈಗ ಈ ಮುಖಂಡರ ಮೇಲಿದ್ದು, ಆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ, ಇಲ್ಲವೋ? ಅವರಿಗೆ ಬಿಟ್ಟ ವಿಚಾರ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಉತ್ತರ ಕರ್ನಾಟಕ ಭಾಗದಿಂದ ಯಾವುದೇ ಕಚೇರಿಗಳು ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗಲ್ಲ. ಸರ್ಕಾರದಲ್ಲಿ ಅಂಥ ಬೆಳವಣಿಗೆ ನಡೆಯುತ್ತಿಲ್ಲ.

| ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ


ಆಪರೇಷನ್ ಕಮಲ ಅಂದ್ರೆ ಗೊತ್ತಾ?

ಆಲಮಟ್ಟಿ(ವಿಜಯಪುರ): ಮಾರಾಟದ ವಸ್ತುಗಳಂತೆ 20ರಿಂದ 25 ಕೋಟಿ ರೂ. ಕೊಟ್ಟು ಶಾಸಕರನ್ನು ಖರೀದಿಸುವುದು ಆಪರೇಷನ್ ಕಮಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು. ಈ ಕೆಲಸವನ್ನು ಯಡಿಯೂರಪ್ಪ 2008ರಲ್ಲಿ ಮಾಡುವ ಮೂಲಕ ಅನೈತಿಕ ರಾಜಕಾರಣ ಆರಂಭಿಸಿದರು. ಈಗ ಮತ್ತೆ ಅದನ್ನೆ ಮಾಡುವ ಗುಲ್ಲು ಎದ್ದಿದೆ. ಮಾರಾಟಕ್ಕೆ ಯಾವ ಎಂಎಲ್​ಎಗಳು ಇಲ್ಲ. ಬಿಜೆಪಿಯ ಹಲವು ಶಾಸಕರು ನಮ್ಮನ್ನು ಸಂರ್ಪಸಿದರೂ, ನೀವು ಅಲ್ಲೇ ಇರಿ ಎಂದು ಸಲಹೆ ನೀಡಿದ್ದೇನೆ ಎಂದರು. ಅಖಂಡ ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಜನರು ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೇಳಲಿ. ಆದರೆ, ಪ್ರತ್ಯೇಕ ರಾಜ್ಯಕ್ಕೆ ನನ್ನ ವಿರೋಧವಿದೆ. ನಾನು ಯಾವಾಗಲೂ ಅಖಂಡ ಕರ್ನಾಟಕದ ಪರ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಸಹಜ. ಅದನ್ನು ಸರಿದೂಗಿಸಿ ಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ನಿಗಮ-ಮಂಡಳಿ ಹಾಗೂ ಬಾಕಿ ಸಚಿವ ಸ್ಥಾನಗಳನ್ನು ಲೋಕಸಭಾ ಚುನಾವಣೆಗೂ ಪೂರ್ವವೇ ತುಂಬಲಿದ್ದೇವೆ.

| ಡಾ.ಜಿ.ಪರಮೇಶ್ವರ್ ಡಿಸಿಎಂ


ವಾರ್ಡ್ ಎಲೆಕ್ಷನ್ ಗೆಲ್ಲಲು ಕಾಂಗ್ರೆಸ್ ಪ್ರಮಾಣ ಸೂತ್ರ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶತಾಯಗತಾಯ ಪ್ರಾಬಲ್ಯ ವೃದ್ಧಿಸಲು ಸಂಕಲ್ಪತೊಟ್ಟಿರುವ ಕಾಂಗ್ರೆಸ್, ಮುಂದಾಗಬಹುದಾದ ಅಸಮಾಧಾನ ಗ್ರಹಿಸಿ ಅದನ್ನು ಶಮನ ಮಾಡಲು ಸಿದ್ಧ ಸೂತ್ರವೊಂದನ್ನು ರೂಪಿಸಿದೆೆ.

29 ನಗರಸಭೆಯ 927 ವಾರ್ಡ್​ಗಳು, 53 ಪುರಸಭೆಯ 1,247 ವಾರ್ಡ್ ಮತ್ತು 23 ಪಟ್ಟಣ ಪಂಚಾಯಿತಿಯ 400 ವಾರ್ಡ್ ಸೇರಿ ಒಟ್ಟು 2,574 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿಯೇ ದೊಡ್ಡದಿದೆ. ಟಿಕೆಟ್ ಸಿಗದವರು ಕೊನೇ ಕ್ಷಣದಲ್ಲಿ ಬಂಡೇಳುವುದು, ಸೋಲಿಸಲು ಹಠ ತೊಡುವುದು, ಎದುರಾಳಿ ಅಭ್ಯರ್ಥಿಗೆ ಸಹಾಯ ಮಾಡುವುದು ಸಾಮಾನ್ಯ ಸಂಗತಿ. ಈ ಬೆಳವಣಿಗೆಗೆ ತಡೆಹಾಕಲು ‘ಪ್ರಮಾಣ’ ತಂತ್ರವೊಂದನ್ನು ಅನುಸರಿಸುತ್ತಿದೆ.

ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಗೆ ಕೆಪಿಸಿಸಿ ಮಾರ್ಗಸೂಚಿ ಸಿದ್ಧಪಡಿಸಿದೆ. ಇದರಲ್ಲಿ ಪಕ್ಷದಿಂದ ಅಂತಿಮವಾಗಿ ಆಯ್ಕೆಯಾಗುವ ಅಧಿಕೃತ ಅಭ್ಯರ್ಥಿ ಪರ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಎಲ್ಲ ಆಕಾಂಕ್ಷಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಎದುರು ಪ್ರಮಾಣ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಮನವೊಲಿಕೆ ನಡೆದು ಪಕ್ಷದ ಅಧಿಕೃತ ಅಭ್ಯರ್ಥಿಗೆ ಹಿನ್ನಡೆಯಾಗುವುದಿಲ್ಲ ಎಂಬುದು ಕೆಪಿಸಿಸಿ ನಂಬಿಕೆ.

ಮಾನದಂಡ: ಆಕಾಂಕ್ಷಿಗೆ ಆಯಾ ಕ್ಷೇತ್ರದಲ್ಲಿರುವ ಜನಪ್ರಿಯತೆ, ಪ್ರಭಾವ, ಜನ ಬೆಂಬಲ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವರ ರಾಜಕೀಯ ಹಿನ್ನೆಲೆ, ಸಮಾಜದಲ್ಲಿನ ಸ್ಥಾನಮಾನ, ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅನುಭವ, ಸಂಘಟನೆ ಸೇವೆ ಮುಂತಾದ ಅಂಶ ಪರಿಗಣಿಸಬೇಕೆಂದು ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ವಾರ್ಡ್​ಗೆ ಸ್ಥಳಿಯರಲ್ಲದ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಅವರಿಗೆ ಕ್ಷೇತ್ರದಲ್ಲಿರುವ ಪ್ರಭಾವ, ಜನ ಮತ್ತು ಕಾರ್ಯಕರ್ತರಿಗೆ ಇರುವ ಪರಿಚಯವನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಲಾಗಿದೆ.

ವಾರ್ಡ್ ಹಂತದಲ್ಲೇ ಅಭಿಪ್ರಾಯ ಸಂಗ್ರಹಿಸಿ, ಎಲ್ಲರನ್ನು ಕೇಳಿಯೇ ತೀರ್ವನಿಸಲಾಗಿದೆ ಎಂಬ ಭಾವನೆ ಬರುವಂತೆ ಸಮಿತಿ ಕಾರ್ಯನಿರ್ವಹಿಸಬೇಕು. ಸಾಧ್ಯವಾದಷ್ಟು ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಸರ್ವಾನುಮತದ ಅಭ್ಯರ್ಥಿ ಸೂಚಿಸುವಂತೆ, ಅವರ ಗೆಲುವಿಗೆ ಉಳಿದೆಲ್ಲರೂ ಸಹಕಾರ ಮಾಡುವಂತಹ ವಾತಾವರಣ ಸಿದ್ಧಪಡಿಸಲು ಪ್ರಯತ್ನ ಮಾಡಬೇಕು ಎಂದು ಜವಾಬ್ದಾರಿ ನೀಡಲಾಗಿದೆ. ಆಕಾಂಕ್ಷಿಗಳ ವಿರುದ್ಧ ಯಾವುದಾದರೂ ಗುರುತರ ಕ್ರಿ್ರುನಲ್ ಆರೋಪಗಳಿದ್ದಲ್ಲಿ ಅಥವಾ ಅವರನ್ನು ಆಯ್ಕೆ ಮಾಡುವುದರಿಂದ ಪಕ್ಷದ ವರ್ಚಸ್ಸಿಗೆ ಕುಂದು ತರುವ ಅಂಶಗಳಿದ್ದಲ್ಲಿ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಎಚ್ಚರಿಸಲಾಗಿದೆ.

ಆಯ್ಕೆಗೆ ಸಮಿತಿ

ಬ್ಲಾಕ್ ಹಂತದಲ್ಲಿ ಅರ್ಜಿ ಆಹ್ವಾನಿಸಿ, ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳ ಪರಿಶೀಲನೆ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಶಿಫಾರಸು ಮಾಡಲು ಸಮಿತಿ ರಚಿಸಬೇಕೆಂದು ಹೇಳಲಾಗಿದೆ. ಜತೆಗೆ ಸಮಿತಿಯಲ್ಲಿ ಯಾರು ಇರಬೇಕೆಂಬುದನ್ನು ಸೂಚನೆ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡವರಿಗೂ ಸ್ಥಾನ ಕಲ್ಪಿಸಲಾಗಿದೆ.

ನ್ಯಾಷನಲ್ ಹೆರಾಲ್ಡ್ ಚಂದಾದಾರಿಕೆ ಕಡ್ಡಾಯ!

ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಿಚಿತ್ರವಾದ ಕಡ್ಡಾಯ ನಿಯಮವೊಂದಿದೆ. ಅರ್ಜಿದಾರರು ಕೆಪಿಸಿಸಿ ಅದೇಶದ ಪ್ರಕಾರ ಮಾಡಿರುವ ಸದಸ್ಯತ್ವ ನೋಂದಣಿಯಾಗಿರಬೇಕು, ಎಐಸಿಸಿ ಅನುಷ್ಟಾನದ ಶಕ್ತಿ ಯೋಜನೆಗೂ ನೋಂದಣಿ ಕಡ್ಡಾಯ. ಜತೆಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಚಂದಾದಾರರಾಗಬೇಕು. ಅರ್ಜಿ ಸಲ್ಲಿಸುವಾಗಲೇ 1,900 ರೂ. ನೀಡಿ ಚಂದಾದಾರಿಕೆ ಮಾಡಿಸಬೇಕು. ಅಂದಾಜು 2,500 ಕ್ಷೇತ್ರಗಳಿಂದ 12 ಸಾವಿರಕ್ಕಿಂತ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಆಗಬಹುದೆಂಬುದು ಎಐಸಿಸಿ ನಿರೀಕ್ಷೆಯಾಗಿದೆ.

Leave a Reply

Your email address will not be published. Required fields are marked *

Back To Top