ಕಾಂಗ್ರೆಸ್, ಜೆಡಿಎಸ್ ಮಾತಿನ ಚಕಮಕಿ

ಹುಣಸೂರು: ಆಸ್ಪತ್ರೆ ಕಟ್ಟಡದ ಭೂಮಿಪೂಜೆ ಸಮಾರಂಭಕ್ಕೆ ಅಳವಡಿಸಿದ್ದ ಪ್ಲೆಕ್ಸ್‌ನಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರವನ್ನು ಅಳವಡಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬೈಪಾಸ್‌ರಸ್ತೆಯ ತೋಟಗಾರಿಕಾ ಇಲಾಖೆಯ ಬಳಿ ಏರ್ಪಡಿಸಿದ್ದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಕ್ಸಮರ ನಡೆಯಿತು.
ಭೂಮಿಪೂಜೆ ಕಾರ್ಯಕ್ರಮಕ್ಕಾಗಿ ತಾಲೂಕು ಆಡಳಿತದಿಂದ ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಪೋಸ್ಟರ್ ರೂಪಿಸಿರಲಿಲ್ಲ. ಲೋಕಸಭಾ ಚುನಾವಣೆ ಘೋಷಣೆಯಾಗಬಹುದೆಂಬ ಹಿನ್ನೆಲೆಯಲ್ಲಿ ಶಾಸಕರ ಒತ್ತಾಯದಂತೆ ಅವಸರದಿಂದ ಕಾರ್ಯಕ್ರಮ ರೂಪಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದ ಅಭಿಮಾನಿಗಳು ತಮ್ಮ ತಮ್ಮ ನಾಯಕರನ್ನೊಳಗೊಂಡ ಫ್ಲೆಕ್ಸ್‌ಗಳನ್ನು ಮುಖ್ಯದ್ವಾರದಲ್ಲಿ ಮತ್ತು ಅಲ್ಲಲ್ಲಿ ಅಳವಡಿಸಿದ್ದರು.

ಭೂಮಿಪೂಜೆ ನೆರವೇರಿಸುವ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ರಾಜ್ಯದ ಉಪಮುಖ್ಯಮಂತ್ರಿ ಪರಮೇಶ್ವರ್‌ರ ಭಾವಚಿತ್ರವನ್ನು ಎಲ್ಲೂ ಅಳವಡಿಸಿಲ್ಲವೆಂದು ಆರೋಪಿಸಿ, ಇದು ದಲಿತರಿಗೆ ಮಾಡುತ್ತಿರುವ ಅನ್ಯಾಯ. ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಜೆಡಿಎಸ್ ಪಕ್ಷದ ಕಾರ್ಯಕ್ರಮವೋ ಎಂದು ಕೂಗಾಡಲು ಆರಂಭಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಎಚ್. ವಿಶ್ವನಾಥ್, ಇಲ್ಲಿ ಯಾವುದೇ ಅಧಿಕಾರಿಗಳು ಫ್ಲೆಕ್ಸ್ ಅಳವಡಿಸಿಲ್ಲ, ಆಯಾ ಪಕ್ಷದ ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿದ್ದಾರೆ. ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ಬೇಡ ಬನ್ನಿ ಪೂಜೆ ನೆರವೇರಿಸೋಣ ಎಂದು ಹೇಳಿ ತೆರಳಿದರು. ಶಾಸಕರ ಮಾತಿಗೆ ಎಲ್ಲರೂ ಒಪ್ಪಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ನಂತರ ಉಸ್ತುವಾರಿ ಸಚಿವರು ಹೊರಟವೇಳೆ ಮುಖ್ಯದ್ವಾರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಉಸ್ತುವಾರಿ ಸಚಿವರು, ಶಾಸಕರಿಗೆ ಧಿಕ್ಕಾರ ಮೊಳಗಿಸಲು ಆರಂಭಿಸಿದರು. ಇದರಿಂದ ಕೋಪಗೊಂಡ ಜೆಡಿಎಸ್ ಕಾರ್ಯಕರ್ತರು ಮುಖ್ಯದ್ವಾರದಲ್ಲಿ ಕಾಂಗ್ರೆಸ್ ಮುಖಂಡರು ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ಭಾವಚಿತ್ರವಿಲ್ಲದಿರುವುದನ್ನು ಕಂಡು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದರು.

ಜಿಪಂ ಸದಸ್ಯೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಧಿಕ್ಕಾರ ಮೊಳಗಿಸಿದರು. ಕಾಂಗ್ರೆಸ್‌ನ ಎರಡನೇ ಸಾಲಿನ ಮುಖಂಡರನ್ನು ‘ನಿಮ್ಮ ಪಕ್ಷದ ನಾಯಕರ ಫೋಟೋ ನೀವೇ ಹಾಕಿಲ್ಲ, ನಮಗೇನ್ರೀ ಕೇಳ್ತೀರಾ’ ಎಂದು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಕೂಡಲೇ ಸ್ಥಳದಲ್ಲಿದ್ದ ಎಲ್ಲ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಭೂಮಿಪೂಜೆ ನೆರವೇರುವುದಕ್ಕೂ ಮುನ್ನ ಜಿಪಂ ಸದಸ್ಯೆ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಹಿಂಬಾಲಕರೊಂದಿಗೆ ಶಾಸಕರ ಬಳಿ ಆಗಮಿಸಿ ಉಪಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡಸುವುದಾಗಿ ಧಮಕಿ ಹಾಕಿದರು. ಇದನ್ನು ಖಂಡಿಸಿದ ಶಾಸಕರು ಅದಕ್ಕೆ ಇಲ್ಲಿ ಅವಕಾಶವಿಲ್ಲ, ಬೇರೆಡೆ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.

ಶಾಸಕ ಪತ್ರಿಕಾಗೋಷ್ಠಿ: ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ಥಳದಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಎಚ್.ವಿಶ್ವನಾಥ್, ಹುಣಸೂರಿನ ಇತಿಹಾಸದಲ್ಲಿ ಕಾಂಗ್ರೆಸ್ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಜನರಿಂದ ತಿರಸ್ಕೃತಗೊಂಡ ಮಾಜಿ ಶಾಸಕರ ಅಭಿಮಾನಿಗಳು ಪ್ರಜಾಪ್ರಭುತ್ವಕ್ಕೆ ಬೆಲೆ ನೀಡುತ್ತಿಲ್ಲ. ಸರ್ಕಾರಿ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇಷ್ಟಕ್ಕೂ ಯಾವ ರಾಜಕಾರಣಿಯೂ ತನ್ನ ಕಿಸೆಯಿಂದ ಹಣ ಹಾಕಿ ಅಭಿವೃದ್ಧಿ ಮಾಡುವುದಿಲ್ಲ. ಕೆಲದಿನಗಳ ಹಿಂದೆ ಮಾಜಿ ಶಾಸಕರು ಬಿಳಿಕೆರೆ ಕೆರೆಗೆ ಬಾಗಿನ ಅರ್ಪಿಸಿ ತನ್ನದೇ ಕಾರ್ಯ ಎಂದಿದ್ದಾರೆ. ಅದನ್ನು ಇಲ್ಲ ಎಂದವರ‌್ಯಾರು? ಆದರೆ, ಈಗ ಅವರು ಸೋತಿದ್ದಾರೆ. ಜನರ ಮಾತಿಗೆ ಮನ್ನಣೆ ನೀಡಬೇಕಲ್ಲವೇ? ತಾಲೂಕಿನಲ್ಲಿ ಶಾಂತಿ, ಸಾಮರಸ್ಯ ಇರುವುದು ಅವರಿಗೆ ಬೇಕಿಲ್ಲ ಎಂದೆನಿಸುತ್ತದೆ. ಕಳೆದ 7 ತಿಂಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದೇನೆ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಹಾಲಿ ಶಾಸಕರ ನೇತೃತ್ವದಲ್ಲಿ ಜಿಪಂ ಸದಸ್ಯರು, ಉಪಾಧ್ಯಕ್ಷರ ಸಮ್ಮುಖದಲ್ಲಿ ಭೂಮಿಪೂಜೆ ನಡೆದಿದೆ. ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಬಾರದು. ಇದೀಗ ಕೇವಲ 7 ತಿಂಗಳುಗಳಷ್ಟೆ ಕಳೆದಿರುವುದು. ಈಗಲೇ ಇಷ್ಟು ಅಸಮಾಧಾನವಿದ್ದರೆ ಇನ್ನೂ 5 ವರ್ಷಗಳ ಕಾಲ ಮಾಜಿ ಶಾಸಕರು ಇರುವುದಾದರೂ ಹೇಗೆ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಎಚ್.ವೈ. ಮಹದೇವ್, ಜಿಪಂ ಸದಸ್ಯ ಎಂ.ಬಿ. ಸುರೇಂದ್ರ ಮುಖಂಡರಾದ ಗಣೇಶ್ ಗೌಡ, ಚಂದ್ರಶೇಖರ್ ಇತರರಿದ್ದರು.

ಆಸ್ಪತ್ರೆ ಕಟ್ಟಡಕ್ಕೆ ಜಿಟಿಡಿ ಭೂಮಿಪೂಜೆ25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡ
ಹುಣಸೂರು: ಪಟ್ಟಣದ ಬೈಪಾಸ್‌ರಸ್ತೆಯ ತೋಟಗಾರಿಕಾ ಇಲಾಖೆ ಬಳಿ 4.05 ಎಕರೆ ವಿಸ್ತೀರ್ಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕದ ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಜಿ.ಟಿ. ದೇವೇಗೌಡ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೈಟೆಕ್ ತಂತ್ರಜ್ಞಾನವನ್ನೊಳಗೊಂಡ ಸುಸಜ್ಜಿತ 100 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕಟ್ಟಡವು ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿಯನ್ನು ಒಳಗೊಂಡಿದ್ದು, ಸಕಲ ಸೌಲಭ್ಯಗಳನ್ನೂ ಒಳಗೊಳ್ಳಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್. ವಿಶ್ವನಾಥ್ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ಈ ಆಸ್ಪತ್ರೆಯ ಆವರಣದಲ್ಲೇ ತಾಯಿ ಮತ್ತು ಶಿಶು ವಿಭಾಗ ಮತ್ತು ಹೆರಿಗೆ ವಿಭಾಗವನ್ನೂ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಅನುದಾನವನ್ನೂ ಒದಗಿಸಿಕೊಳ್ಳಲಾಗುವುದು. ಆಸ್ಪತ್ರೆಯ ನೆಲಮಹಡಿಯಲ್ಲಿ ಔಷಧ ವಿತರಣೆ, ಹಿರಿಯ ನಾಗರಿಕರ ವಾಡ, ರೇಡಿಯಲಜಿ, ಸಿಟಿಸ್ಕಾೃನ್, ಪೊಲೀಸ್ ಔಟ್‌ಪೋಸ್ಟ್ ಸೇರಿದಂತೆ ಅತ್ಯವಶ್ಯಕ ವಿಭಾಗಗಳನ್ನು ಒಳಗೊಂಡಿದೆ. ಮೊದಲ ಮಹಡಿಯಲ್ಲಿ ಪ್ರಯೋಗಾಲಯ, ಐಸಿಯು ಘಟಕ(15 ಮಂದಿ ಸಾಮರ್ಥ್ಯ), ಜನರಲ್ ವಾರ್ಡ್(42ಮಂದಿ), ಡಯಾಲಿಸಿಸ್ ವಾರ್ಡ್(17 ಮಂದಿ ಸಾಮರ್ಥ್ಯ) ಸೇರಿದಂತೆ ಇನ್ನಿತರ ವಿಭಾಗಗಳು ಹಾಗೂ ಎರಡನೇ ಮಹಡಿಯಲ್ಲಿ ಚಿಕಿತ್ಸಾ ಕೊಠಡಿ, ಸಿಬ್ಬಂದಿ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ (2), ಅರಿವಳಿಕೆ ತಜ್ಞರ ಕೊಠಡಿ ಹೀಗೆ ವಿವಿಧ ವಿಭಾಗಗಳನ್ನು ಹೊಂದಲಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯರಾದ ಎಂ.ಬಿ. ಸುರೇಂದ್ರ, ಕಟ್ಟನಾಯ್ಕ, ಪುಷ್ಪಾ ಅಮರನಾಥ್, ಸಾವಿತ್ರಮ್ಮ, ತಾಪಂ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಸದಸ್ಯ ತಟ್ಟೆಕೆರೆ ಶ್ರೀನಿವಾಸ್, ನಗರಸಭಾಧ್ಯಕ್ಷ ಎಚ್.ವೈ. ಮಹದೇವ್, ನಗರಸಭಾ ಸದಸ್ಯರು, ಆರೋಗ್ಯ ಇಲಾಖೆಯ ಡಿಎಚ್‌ಒ ಡಾ.ಬಸವರಾಜು, ಟಿಎಚ್‌ಒ ಡಾ.ಕೀರ್ತಿಕುಮಾರ್, ತಹಸೀಲ್ದಾರ್ ಬಸವರಾಜು ಇತರರಿದ್ದರು.